ಪುತ್ತೂರು: ಪುತ್ತೂರಿನ ಹೆಸರಾಂತ ವಿದ್ಯಾಲಯವಾದ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧೀನದಲ್ಲಿರುವ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಪ್ರತಿವರ್ಷ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಶತ ಜಯಘೋಷ್ ಪರಿಕಲ್ಪನೆಯಡಿ ಭವ್ಯ ಘೋಷ್ ಪಥಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಿ ಘೋಷ್ ಪಥಸಂಚಲನ ನಡೆಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ವಿವೇಕಾನಂದ ವಿದ್ಯಾಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಈ ಐತಿಹಾಸಿಕ ಸಂಚಲನದಲ್ಲಿ ಪಾಲ್ಗೊಂಡಿದ್ದರು.


ಘೋಷ್ ಪಥಸಂಚಲನದಲ್ಲಿ ವಿದ್ಯಾರ್ಥಿಗಳು ಅನಕ, ಪಣವ, ಶಂಖ, ವಂಶಿ, ತ್ರಿಭುಜ, ಜಲ್ಲರಿ, ಕೊಳಲು ಸೇರಿದಂತೆ ವಿವಿಧ ವಾದ್ಯೋಪಕರಣಗಳೊಂದಿಗೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ್ದು, ನೋಡುಗರ ಮನ ಸೆಳೆಯಿತು.


ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ಕೊಂಬೆಟ್ಟು ಅಟಲ್ ಉದ್ಯಾನವನ ಮತ್ತು ಯು. ಪೂವಪ್ಪ ಅವರೊಂದಿಗೆ ಪುತ್ತೂರಿನ ಏಲ್ಮುಡಿಯಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಕಲ್ಲಾರೆ ಹಾಗೂ ಬೊಳುವಾರು ಪ್ರದೇಶಗಳಿಂದ ಏಕಕಾಲದಲ್ಲಿ ಪಥಸಂಚಲನ ಆರಂಭಗೊಂಡು ಪುತ್ತೂರಿನ ಮುಖ್ಯರಸ್ತೆಯ ಮೂಲಕ ಸಂಚರಿಸಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾರೋಪಗೊಂಡಿತು.





ರಥಬೀದಿಯಲ್ಲಿ ನಡೆದ ಜಯಘೋಷ್ ಪಥಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪಾಲ್ಗೊಂಡರು. ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ರಸ್ತೆ ಬದಿಯಲ್ಲಿ ಸಾಲಾಗಿ ನಿಂತು ಪಥಸಂಚಲನಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.


