ಪುತ್ತೂರು: ಆತ್ಮೀಯತೆ, ಅಧ್ಯಯನಶೀಲತೆ ಹಾಗೂ ಸಾಧನಾಶೀಲತೆಯ ಮೂಲಕ ಸಮಾಜಕ್ಕಾಗಿ ಬದುಕಿದವರು ನಕ್ಷತ್ರದಂತೆ ಮಿನುಗುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ಸವಣೂರು ಕೆ. ಸೀತಾರಾಮ ರೈ ಅವರು ಸಮಾಜಕ್ಕೆ ದಿಗ್ದರ್ಶನ ಮಾಡುವ ವ್ಯಕ್ತಿತ್ವವಾಗಿದ್ದಾರೆ ಎಂದು ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯನ್ನು ಶನಿವಾರ ಈಶ್ವರಮಂಗಲದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಗ್ರಾಮವಾದ ಸವಣೂರನ್ನು ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕವಾಗಿ ಬೆಳೆಸಿದ ಸೀತಾರಾಮ ರೈ ಅವರ ದೂರದೃಷ್ಟಿಯಿಂದ ಊರು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದರು.






ಪ್ರಧಾನಿ ನರೇಂದ್ರ ಮೋದಿ ಅವರು ಜನ್‌ಧನ್ ಖಾತೆ ಜಾರಿಗೆ ತರುವುದಕ್ಕೂ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.80ಕ್ಕೂ ಹೆಚ್ಚು ಜನರಿಗೆ ಬ್ಯಾಂಕ್ ಖಾತೆಗಳಿದ್ದವು. ಇದಕ್ಕೆ ಸಹಕಾರಿ ಸಂಘಗಳೇ ಪ್ರಮುಖ ಕಾರಣ. ದ.ಕ. ಜಿಲ್ಲೆ ಸಹಕಾರ ರಂಗದ ಕಾಶಿಯಾಗಿದೆ. ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆ ಪರಿಚಯಿಸಿದ ಶ್ರೇಯಸ್ಸು ಜನಾರ್ದನ ಪೂಜಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆಯಾದರೂ, ಆರ್ಥಿಕ ಶಿಕ್ಷಣ ನೀಡಿದ್ದು ಸಹಕಾರಿ ಸಂಘಗಳೇ. ಸಾಮಾನ್ಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿಯೂ ಕೋಆಪರೇಟಿವ್ ಸೊಸೈಟಿಗಳು ಪ್ರಮುಖ ಪಾತ್ರವಹಿಸಿವೆ ಎಂದು ಅವರು ಹೇಳಿದರು.


ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಸಹಕಾರ ಕ್ಷೇತ್ರದ ಆಳವಾದ ಜ್ಞಾನ ಹೊಂದಿರುವ ಸೀತಾರಾಮ ರೈ ಅವರ ನೇತೃತ್ವದ ಆದರ್ಶ ಸೊಸೈಟಿ ತನ್ನ ಹೆಸರಿಗೆ ಅನ್ವರ್ಥವಾಗಿದೆ. ದೇಶದಲ್ಲೇ ಒಂದೇ ರೀತಿಯ ಸಹಕಾರಿ ಬೈಲಾ ಹಾಗೂ ಸಾಫ್ಟ್‌ವೇರ್ ಅಳವಡಿಕೆಯ ಮೂಲಕ ಸರ್ಕಾರದ ಮಾರ್ಗದರ್ಶನವೂ ಈ ಕ್ಷೇತ್ರಕ್ಕೆ ದೊರಕುತ್ತಿದೆ ಎಂದರು.
ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಿದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸಹಕಾರಿ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ, ಕಳೆದ 58 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. 2002ರಲ್ಲಿ ಆರಂಭಗೊಂಡ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಆರಂಭದಿಂದಲೇ ಸದಸ್ಯರಿಗೆ ನಿರಂತರ ಡಿವಿಡೆಂಡ್ ನೀಡುತ್ತಾ ಯಶಸ್ಸು ಸಾಧಿಸಿದೆ. ಬೇರೆ ಜಿಲ್ಲೆಗಳಿಗೆ ಶಾಖೆಗಳ ವಿಸ್ತರಣೆಯೊಂದಿಗೆ ಸವಣೂರಿನಲ್ಲಿ 6 ಕೋಟಿ ವೆಚ್ಚದಲ್ಲಿ ಮುಖ್ಯ ಕಚೇರಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಮುಂದಿನ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಂಘದ ಸಿಬಂದಿಯಾಗಿದ್ದು ಪಾಟ್ನಾದಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾರತ ರಾಷ್ಟ್ರೀಯ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ ಸಾಧನೆ ಮಾಡಿದ ಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಸಂಘದ ಸುಳ್ಯ ಶಾಖೆಯ ಸಿಬಂದಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅಶ್ವಿನ್ ಎಲ್. ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಜಯಪ್ರಕಾಶ್ ರೈ, ರವೀಂದ್ರನಾಥ ಶೆಟ್ಟಿ ಕೇನ್ಯ, ಬಾಪು ಸಾಹೇಬ್, ರಶ್ಮಿ ಎಸ್. ರೈ, ವಿ.ವಿ. ನಾರಾಯಣ ಭಟ್, ಸಹಾಯಕ ಮಹಾ ಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ., ಕಟ್ಟಡದ ಮಾಲಕ ಗಣೇಶ್ ರೈ, ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶಾಖೆಯ ವ್ಯವಸ್ಥಾಪಕಿ ರಕ್ಷಾ, ಮಹಾಪ್ರಬಂಧಕ ವಸಂತ ಜಾಲಾಡಿ ಹಾಗೂ ಪಾಂಡೇಶ್ವರ ಶಾಖೆಯ ಪ್ರಭಾರ ವ್ಯವಸ್ಥಾಪಕಿ ಮಹಾಲಕ್ಷ್ಮೀ ಕೆ. ಉಪಸ್ಥಿತರಿದ್ದರು.


