ಕಡಬ: ಕಡಬ ತಾಲೂಕಿನ ಅಲಂಕಾರು ಸಮೀಪದ ಕುದ್ಮಾರು ಗ್ರಾಮದ ಇಬ್ಬರು ಯುವಕರು ಸ್ವಚ್ಛತೆ ಕುರಿತು ಮಾದರಿ ಕಾರ್ಯ ನಡೆಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. “ಸ್ವಚ್ಛ ಭಾರತ” ಎಂಬುದು ಕೇವಲ ಘೋಷಣೆ ಅಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ತಮ್ಮ ಕಾರ್ಯದ ಮೂಲಕ ಅವರು ತೋರಿಸಿದ್ದಾರೆ.





ಕುದ್ಮಾರು ಗ್ರಾಮದ ಅಕ್ಷಯ್ ಕೆ.ಬಿ. ಬರೆಪಾಡಿ ಹಾಗೂ ಸತೀಶ್ ಅರುವಾರ ಎಂಬ ಯುವಕರು ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಕಾಲವನ್ನು ಗ್ರಾಮದ ಸ್ವಚ್ಛತೆಗೆ ಮೀಸಲಿಟ್ಟು ರಸ್ತೆ ಬದಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿಗಳು, ಸಿಗರೇಟ್ ಪ್ಯಾಕೆಟ್ ಸೇರಿದಂತೆ ಪರಿಸರಕ್ಕೆ ಹಾನಿಕಾರಕ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಗೋಣಿ ಚೀಲಗಳಷ್ಟು ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿರುವುದಾಗಿ ತಿಳಿದುಬಂದಿದೆ.
ಸಾಮಾನ್ಯವಾಗಿ ಮಾಲಾಧಾರಿಗಳು ಮಾಲೆ ಧರಿಸಿದ ಅವಧಿಯಲ್ಲಿ ಭಜನೆ–ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದು ರೂಢಿಯಾಗಿದೆ. ಆದರೆ ಅಕ್ಷಯ್ ಕೆ.ಬಿ. ಬರೆಪ್ಪಾಡಿ ಮತ್ತು ಸತೀಶ್ ಅರುವಾರ ಅವರು “ಜನಸೇವೆ ಜನಾರ್ಧನ ಸೇವೆ” ಎಂಬ ನಂಬಿಕೆಯಿಂದ ಮಾಲೆ ಧರಿಸಿದ ದಿನದಿಂದಲೇ ರಸ್ತೆ ಬದಿಯ ಕಸ ತೆರವು ಮಾಡುವ ಕಾರ್ಯ ಆರಂಭಿಸಿದ್ದಾರೆ. ಮಾಲೆ ವಿಸರ್ಜನೆಯ ನಂತರವೂ ಈ ಕಾರ್ಯವನ್ನು ನಿಲ್ಲಿಸದೆ ಮುಂದುವರಿಸುತ್ತಿರುವುದು ಇವರ ಪರಿಸರ ಪ್ರೇಮ ಹಾಗೂ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ.
ಇವರ ಈ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು, ಇಂತಹ ಕಾರ್ಯಗಳಿಂದ ಸಮಾಜದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.



