ನವದೆಹಲಿ:
ದೆಹಲಿಯಲ್ಲಿ ಉಂಟಾದ ದಟ್ಟ ಹೊಗೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಇಂಡಿಗೋ ವಿಮಾನವೊಂದು ಟೇಕಾಫ್ ಆಗದೆ ವಿಳಂಬಗೊಂಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಕರ್ನಾಟಕ ರಾಜ್ಯದ 21 ಕಾಂಗ್ರೆಸ್ ಶಾಸಕರು ವಿಮಾನದಲ್ಲೇ ಹಲವು ಗಂಟೆಗಳ ಕಾಲ ಸಿಲುಕಿದ ಘಟನೆ ಭಾನುವಾರ ನಡೆದಿದೆ.
ಭಾನುವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ವೋಟ್ ಛೋರಿ’ ಸಮಾವೇಶದಲ್ಲಿ ಭಾಗವಹಿಸಲು ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಅಲ್ಲಿಂದ ಇಂದು ದಾವಣಗೆರೆಯಲ್ಲಿ ನಡೆಯಲಿರುವ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ದೆಹಲಿಯಿಂದ ಬೆಳಗಾವಿಗೆ ತೆರಳಲು ಇಂಡಿಗೋ ವಿಮಾನವನ್ನು ಏರಿದ್ದರು.




ಮಾಹಿತಿಯಂತೆ, ಶಾಸಕರನ್ನು ಹೊತ್ತ ವಿಮಾನವು ಬೆಳಗ್ಗೆ 5.30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ಪ್ರಯಾಣಿಕರು ವಿಮಾನದ ಒಳಗೆ ಕುಳಿತ ಬಳಿಕ, ದಟ್ಟ ಹೊಗೆ ಹಾಗೂ ಹವಾಮಾನ ವೈಪರೀತ್ಯದಿಂದ ಟೇಕಾಫ್ಗೆ ಅನುಮತಿ ಲಭಿಸಲಿಲ್ಲ. ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶಾಸಕರು ವಿಮಾನದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್ ಆಗಿಲ್ಲ. ವಿಮಾನ ಯಾವ ಸಮಯಕ್ಕೆ ಹೊರಡಲಿದೆ ಎಂಬ ಕುರಿತು ಸಿಬ್ಬಂದಿಯಿಂದ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎನ್ನಲಾಗಿದೆ.
ದೆಹಲಿಯಲ್ಲಿ ಮುಂದುವರಿದ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಅನೇಕ ವಿಮಾನಗಳು ವಿಳಂಬಗೊಂಡಿವೆ.


ವಿಮಾನದಲ್ಲಿದ್ದ ಶಾಸಕರು ಮತ್ತು ಸಚಿವರು:
ಕೋನರೆಡ್ಡಿ, ಬಸವರಾಜ ಬಾದರ್ಲಿ, ಆನಂದ ಗಡ ದೇವರಮಠ, ಹೆಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜುಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜೆ.ಎಸ್. ಪಾಟೀಲ್, ಮಾಲಿಕಯ್ಯ ಗತ್ತೇದಾರ್, ಈಶ್ವರ್ ಕಂಡ್ರೆ, ಜೆ.ಟಿ. ಪಾಟೀಲ್, ತಿಪ್ಪಣ್ಣ ಕಾಮಕನೂರು, ನಾಗೇಂದ್ರ, ಎಂ.ಬಿ. ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್ ಹಾಗೂ ಕೆ.ಜೆ. ಜಾರ್ಜ್.
ವಿಮಾನ ವಿಳಂಬದಿಂದ ಶಾಸಕರ ಕಾರ್ಯಕ್ರಮಗಳ ಮೇಲೆ ಪರಿಣಾಮ ಬಿದ್ದಿದ್ದು, ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಕಾಯಲಾಗುತ್ತಿದೆ.


