ತುಮಕೂರು : ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಗುಡ್‌ನ್ಯೂಸ್ ನೀಡಿದ್ದಾರೆ. ಬಾಕಿ ಇರುವಂತ ಸೆಪ್ಟೆಂಬರ್, ಅಕ್ಟೋಬರ್ ಎರಡು ತಿಂಗಳ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ, ಗೃಹಲಕ್ಷ್ಮೀ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡುತ್ತೇವೆ. ಸೆಪ್ಟೆಂಬರ್ – ಅಕ್ಟೋಬರ್ 2 ತಿಂಗಳ ಹಣ ಬರಬೇಕು. ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ನಮ್ಮ ಗೃಹಲಕ್ಷ್ಮೀಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ. ಸೆಪ್ಟೆಂಬರ್ ,ಅಕ್ಟೋಬರ್ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು.



ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ಮುಂಚೂಣಿಯಲ್ಲಿದೆ. ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಮಾತನಾಡಿದರು. ಬಹುನಿರೀಕ್ಷಿತ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತುಮಕೂರಿನವರೇ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಹಕಾರದಿಂದ ಇಂದು ನಾನು ಸಚಿವೆಯಾಗಿರುವೆ. ಪರಮೇಶ್ವರ್ ಅವರು ನನಗೆ ನಾಲ್ಕು ಬಾರಿ ಬಿ ಫಾರ್ಮ್ ಕೊಟ್ಟಿದ್ದಾರೆ. ಅವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಚಿವರು ಸ್ಮರಿಸಿದರು.

ಮಂತ್ರಿಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬದಲಾವಣೆ ತರಬೇಕು, ಶಿಸ್ತು ತರಬೇಕು ಅಂತ ಕೆಲಸ ಮಾಡುತ್ತಿರುವೆ. ಎಲ್ಲರ ಸಹಕಾರದಿಂದ ಇಂದು ನಮ್ಮ ಇಲಾಖೆ ಮನೆ ಮನೆಗೆ ಹೆಸರಾಗಿದೆ. ಮೊದಲು ಕೆಡಿಪಿ ಸಭೆಗಳಲ್ಲಿ ನಮ್ಮ ಇಲಾಖೆ ಚರ್ಚೆ ಕೊನೆಯಲ್ಲಿ ಇರುತ್ತಿತ್ತು, ಈಗ ಗೃಹಲಕ್ಷ್ಮಿ ಯೋಜನೆ ಬಂದ್ಮೇಲೆ ಮೊದಲ ಸ್ಥಾನದಲ್ಲಿದೆ ಎಂದರು.
ಎಫ್ ಆರ್ ಎಸ್ ಸಿಸ್ಟಮ್ ನಲ್ಲಿ ಶೇಕಡ 99ರಷ್ಟು ಜಾರಿಗೆ ತಂದ ಕೀರ್ತಿ ತುಮಕೂರಿಗೆ ಸಲ್ಲುತ್ತದೆ. ಕರ್ನಾಟಕ ಯಾವತ್ತು ಮಾಡೆಲ್ ಆಗಿಯೇ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ. ತುಮಕೂರಿನಿಂದ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಾಲ್ಕು ಷೇರುದಾರರನ್ನು ನೋಂದಾಯಿಸಬೇಕು ಎಂದು ಸಚಿವರು ಕರೆ ನೀಡಿದರು.
ನಮ್ಮ ಇಲಾಖೆ ಸಾಮಾಜಿಕ ಬದ್ಧತೆಯ ಜೊತೆಗೆ ಮನುಷ್ಯತ್ವವನ್ನು ಕೊಡುತ್ತದೆ. ಅನುಕಂಪದಿಂದ ಹೃದಯದಿಂದ ಕೆಲಸ ಮಾಡುತ್ತೇವೆ, ಅದಕ್ಕಾಗಿ ಮಹಿಳೆಯರಿಗೆ ಈ ಇಲಾಖೆಯನ್ನು ಕೊಡಲಾಗಿದೆ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರವಿದ್ದರೂ ಕೇಂದ್ರದಿಂದ ಅತಿಹೆಚ್ಚು ಅನುದಾನ ತಂದಿರುವುದು ನಾನು. ಪ್ರತಿಯೊಂದು ಗ್ರಾಮದಲ್ಲಿ ಅಂಗನವಾಡಿ ಕಟ್ಟಡಗಳನ್ನು ಕಟ್ಟಲಾಗಿದೆ ಎಂದರು.
ಖಾಸಗಿ ನರ್ಸರಿಗಳಿಗೆ ಸಾವಿರಾರು ರೂಪಾಯಿ ಕಟ್ಟಬೇಕು. ಬಡ ಮಕ್ಕಳಿಗೆ ತಳಹದಿಯಲ್ಲಿ ಉತ್ತಮ ಶಿಕ್ಷಣ ನೀಡುವ ಸಲುವಾಗಿ ನಮ್ಮ ಇಲಾಖೆಯಿಂದಲೇ ಎಲ್ ಕೆಜಿ ಯುಕೆಜಿ ಆರಂಭಿಸಲಾಗುತ್ತಿದೆ. ನಮ್ಮ ಇಲಾಖೆಯಲ್ಲಿ 15000 ಕಾರ್ಯಕರ್ತೆಯರು ಪದವೀಧರಾಗಿದ್ದಾರೆ. ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅಕ್ಕಪಡೆ ಆರಂಭಿಸಲಾಗುತ್ತಿದ್ದು, ಗಸ್ತು ವಾಹನದಲ್ಲಿ 5 ರಿಂದ 10 ಮಹಿಳೆಯರು ಇರ್ತಾರೆ, ಇಬ್ಬರು ಮಹಿಳಾ ಪೊಲೀಸರು ಇರಲಿದ್ದಾರೆ. ಒಟ್ಟು 31 ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಅಕ್ಕಪಡೆ ಕಾರ್ಯನಿರ್ವಹಿಸಲಿದೆ ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

