ಪುತ್ತೂರು; ಮನೆ ನೆಲಸಮಗೊಳಿಸಿ ವರ್ಷ ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿಗಳಾದ ವೃದ್ಧ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಸೋಮವಾರ ಪುತ್ತೂರು ಆಡಳಿತ ಸೌಧದ ಎದುರು ಆರಂಭಿಸಿರುವ ಆಹೋರಾತ್ರಿ ಧರಣಿ 7 ದಿನವಾದ ಭಾನುವಾರವೂ ಮುಂದುವರಿದಿದೆ.



ಧರಣಿ ನಿರತ ವೃದ್ಧ ದಂಪತಿಯನ್ನು ಶಾಸಕ ಅಶೋಕ್ ರೈ ಅವರು ಭಾನುವಾರ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ವೃದ್ಧ ದಂಪತಿ ತಮಗಾಗಿರುವ ಅನ್ಯಾಯವನ್ನು ಶಾಸಕರಿಗೆ ವಿವರಿಸಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಸೋಮವಾರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಶಾಸಕರು, ಧರಣೆ ಹಿಂತೆಗೆದುಕೊಳ್ಳುವಂತೆ ವೃದ್ಧ ದಂಪತಿಯಲ್ಲಿ ವಿನಂತಿಸಿಕೊಂಡರು. ಆದರೆ ಅವರು ನಾಳೆಯ ತನಕ ಕಾಯುವುದಾಗಿ ಮತ್ತು ನಾಳೆಯಿಂದ (ಸೋಮವಾರದಿಂದ) ಉಪವಾಸ ಧರಣಿ ನಡೆಸುವುದಾಗಿ ತಿಳಿಸಿದರು.



ಧರಣಿ ನಿರತರ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್ ರೈ ಅವರು, ಧರಣಿ ನಿರತ ವೃದ್ಧ ದಂಪತಿ ಬಡವರಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಹೊರಗಿನವರಾದರೂ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಯ ಎದುರು ನ್ಯಾಯದ ಬೇಡಿಕೆಯನ್ನು ಮುಂದಿಟ್ಟು ಧರಣಿ ಕುಳಿತಿದ್ದಾರೆ.ಅವರೊಂದಿಗೆ ಮಾತನಾಡಿ ವಿಚಾರವನ್ನು ತಿಳಿದುಕೊಂಡಿದ್ದೇನೆ. ನಾಳೆಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅವರಿಗೆ ಹೇಗೆ 94 ಸಿಯಡಿ ಅವರ ವಾಸ್ತವ್ಯದ ಮನೆಯ ಅಡಿಸ್ಥಳವನ್ನು ಮಾಡಿಕೊಡಬಹುದು ಎಂಬ ಕುರಿತು ಚರ್ಚಿಸಿ , ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅವರಿಗೆ ಮನೆ ಮಾಡಿಸಿಕೊಡುವ ವಿಚಾರಕ್ಕೂ ಬಂದಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.



