ಪುತ್ತೂರು: ಪುತ್ತೂರಿನ ಕೇಂದ್ರ ಭಾಗದಲ್ಲಿದ್ದ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದ ಸರ್ಕಾರಿ ಬಾವಿ ಹಾಗೂ ಅದರ ಪಕ್ಕದಲ್ಲಿದ್ದ ಆಯತಾಕಾರದ ಕಲ್ಲುಘಟನೆ ಮತ್ತು 15 ಅಡಿ ಎತ್ತರದ ಕಲ್ಲಿನ ತಡೆಗೋಡೆ ಕಟ್ಟಡ ನಿರ್ಮಾಣದ ವೇಳೆ ನೆಲಸಮಗೊಂಡಿರುವ ಆರೋಪ ಕೇಳಿಬಂದಿದೆ.


ಪುತ್ತೂರು ಹೋಬಳಿಯ ಸರ್ವೆ ನಂ.133/9ಎ (0.02 ಎಕರೆ) ವ್ಯಾಪ್ತಿಯಲ್ಲಿ ಇದ್ದ ಸರ್ಕಾರಿ ಬಾವಿ ಮತ್ತು ಪಕ್ಕದಲ್ಲಿದ್ದ ಕಲ್ಲುಘಟನೆ ಅತಿಕ್ರಮಣಕ್ಕೊಳಗಾಗಿದೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಸಂದರ್ಭ ನೀರು ಒದಗಿಸುತ್ತಿದ್ದ ಈ ಬಾವಿ ಸ್ಥಳೀಯರಿಗೆ ಗೃಹೋಪಯೋಗ ಹಾಗೂ ದನಕರಗಳಿಗೆ ನೀರಿನ ಮೂಲವಾಗಿತ್ತು ಎನ್ನಲಾಗಿದೆ.
ಇದೇ ಜಾಗದ ಪಕ್ಕದಲ್ಲಿರುವ ಸರ್ವೆ ನಂ.133/9ಬಿ (0.06 ಎಕರೆ) ಸ್ಥಳವನ್ನು ಪುತ್ತೂರಿನ ವಕೀಲರೊಬ್ಬರು ಖರೀದಿ ಮಾಡಿ 5500 ಚದರ ಅಡಿ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಿಗೆ ಪಡೆದಿದ್ದಾರೆ. ಆದರೆ ಪ್ರಸ್ತುತ 10 ಸಾವಿರ ಚದರ ಅಡಿ ಕಟ್ಟಡ ಬಾಡಿಗೆಗೆ ಲಭ್ಯವಿದೆ ಎಂದು ಜಾಹೀರಾತು ನೀಡಿರುವುದು ಹಾಗೂ ಸೆಟ್‌ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣಗೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರಿ ಬಾವಿ ಇದ್ದ ಸ್ಥಳವನ್ನು ಮಣ್ಣು ಹಾಕಿ ಮುಚ್ಚಿ ಕಟ್ಟಡದ ಪಾರ್ಕಿಂಗ್ ವ್ಯವಸ್ಥೆಗೆ ಬಳಸುವ ಹುನ್ನಾರ ನಡೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ.




ಈ ಕುರಿತು ಸಹಾಯಕ ಆಯುಕ್ತರು, ತಹಶೀಲ್ದಾರ್, ನಗರಸಭಾ ಪೌರಾಯುಕ್ತರು ಹಾಗೂ ನಗರಯೋಜನೆ ಪ್ರಾಧಿಕಾರಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ದೂರು ಸಲ್ಲಿಸಲಾಗಿದೆ. ನಗರಸಭೆಯ ಆಸ್ತಿಯಾಗಿರುವ ಸರ್ಕಾರಿ ಕೆರೆ/ಬಾವಿ ಮುಚ್ಚಲ್ಪಟ್ಟಿದ್ದರೂ ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ವೆ ಇಲಾಖೆ ವಿರುದ್ಧ ಆಕ್ಷೇಪ
ನಗರಸಭೆಯಿಂದ 133/9ಎ ಮತ್ತು 133/9ಬಿ ಜಾಗಗಳ ಗಡಿ ಗುರುತು ಮಾಡಲು ಸರ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ವೆ ಇಲಾಖೆ 133/9ಬಿ ಖಾಸಗಿ ಆಸ್ತಿ ಎಂದು ಮಾತ್ರ ಉತ್ತರ ನೀಡಿದ್ದು, ಸರ್ಕಾರಿ ಬಾವಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡದಿರುವುದಾಗಿ ಆರೋಪಿಸಲಾಗಿದೆ. ಎರಡೂ ವಿಚಾರಗಳ ಕುರಿತು ಮಾಹಿತಿ ಕೇಳಿದ್ದರೂ ಸಮರ್ಪಕ ಉತ್ತರ ನೀಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಮತ್ತೊಮ್ಮೆ ಸರ್ವೆ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.
ಇದರ ನಡುವೆ, ಸರ್ಕಾರಿ ಬಾವಿ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರಸಭಾ ಪೌರಾಯುಕ್ತೆ ವಿದ್ಯಾ ಕಾಳೆ ತಿಳಿಸಿದ್ದಾರೆ.


