ವ್ಯಕ್ತಿಯೊಬ್ಬರ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ವತ್ತೆಯಾದ ಘಟನೆ ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ನಡೆದಿದ್ದು, ಕೊಲೆಯೋ ಅಥವಾ ಪ್ರಾಣಿಯ ದಾಳಿಯಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ. ದಯಾನಂದ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿದೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೋ ಪ್ರಾಣಿ ದಾಳಿಯಿಂದ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.

ದಯಾನಂದ ಅವರು ನಸುಕಿನಲ್ಲಿ 3 ಗಂಟೆ ಸುಮಾರಿಗೆ ಕುಂಪಲ ಬೈಪಾಸ್ ಬಳಿ ವಾಯುವಿಹಾರ ನಡೆಸುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾರೆ. ಅವರ ದೇಹನ ಮೇಲಿನ ಗಾಯದ ಗುರುತುಗಳನ್ನು ನೋಡಿದರೆ, ಅವರ ಮೇಲೆ ಪ್ರಾಣಿ ದಾಳಿ ನಡೆಸಿದ ಹಾಗಿದೆ. ಅವರು ವಾಯು ವಿಹಾರ ನಡೆಸುವಾಗ ಕೋಳಿ ಮಾಂಸದ ಮಳಿಗೆ ಬಳಿ ನಾಯಿಯೊಂದು ಇತ್ತು. ಅದರ ಬಾಯಿಯಲ್ಲಿ ರಕ್ತದ ಕಲೆಗಳಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ನಾಯಿಯೇ ಅವರ ಮೇಲೆ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಾಯಗೊಂಡಿದ್ದ ದಯಾನಂದ ಗಟ್ಟಿ ಅವರು ಮನೆಯವರೆಗೆ ತಲುಪಿದ್ದು, ಅಂಗಳದ ಬಳಿ ಕುಸಿದು ಬಿದ್ದಿದ್ದರು. ಅವರ ಕಣ್ಣು ಗುಡ್ಡೆಯೊಂದು ಹೊರಗೆ ಬಂದಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಣಿದಾಳಿಯಿಂದ ಸಾವು ಸಂಭವಿಸುದ್ದನ್ನು ಖಚಿತಪಡಿಸಿದ್ದಾರೆ.




