ಪುತ್ತೂರು: ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ಮತ್ತೆ ಅಸಮಾಧಾನ ವ್ಯಕ್ತವಾಗಿದ್ದು, ಅರುಣ್ ಕುಮಾರ್ ಪುತ್ತಿಲರ ಕಡೆಗಣನೆ ಕುರಿತು ಪುತ್ತಿಲ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಸಮಾಧಾನ ಸತ್ಯವೆಂದು ಅರುಣ್ ಕುಮಾರ್ ಪುತ್ತಿಲ ತಮ್ಮದೇ ಮಾತಿನಲ್ಲಿ ಒಪ್ಪಿಕೊಂಡಿದ್ದಾರೆ.
ಪಕ್ಷದ ಹಿರಿಯರ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತಮಗೆ ಜವಾಬ್ದಾರಿ ನೀಡಬೇಕೆಂದು ತಿಳಿಸಲಾಗಿತ್ತು ಎಂದು ಪುತ್ತಿಲ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಪಕ್ಷದ ಹಿರಿಯರು ಈ ಬಗ್ಗೆ ಸೂಚಿಸಿದ್ದರು ಎಂದು ಅವರು ಹೇಳಿದರು. “ಯಾವ ಜವಾಬ್ದಾರಿ ಮತ್ತು ಯಾಕೆ ನನಗೆ ನೀಡಲಾಗಿಲ್ಲ ಎಂಬುದನ್ನು ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಬೇಕು,” ಎಂದು ಪುತ್ತಿಲ ಬೇಡಿಕೆ ಮಂಡಿಸಿದ್ದಾರೆ.
ಈ ಹಿಂದೆ ಪುತ್ತೂರು ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲರ ಜೊತೆ ಬಿಜೆಪಿ ಮುಖಂಡರು ಸಭೆ ನಡೆಸಿ, ಪುತ್ತೂರು ನಗರ ಮತ್ತು ಗ್ರಾಮಾಂತರ ಎರಡೂ ಮಂಡಲಗಳ ಜವಾಬ್ದಾರಿಯನ್ನು ಅವರಿಗೆ ನೀಡಲು ನಿರ್ಣಯವಾಗಿದೆಯೆಂದು ಹೇಳಲಾಗುತ್ತಿತ್ತು. ಆದರೆ ಆ ಸಭೆಯಿಂದ ತಾವು ಮಧ್ಯದಲ್ಲೇ ಹೊರನಡೆದರು ಎಂಬ ವದಂತಿಗೆ ಪುತ್ತಿಲ ತಿರುಗೇಟು ನೀಡಿ, “ಇಂತಹ ಯಾವುದೇ ಸಭೆ ನಡೆದಿಲ್ಲ,” ಎಂದು ಸ್ಪಷ್ಟಪಡಿಸಿದರು.




“ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳನ್ನು ಜೋಡಿಸಿ ಜವಾಬ್ದಾರಿ ನೀಡಿದರೆ ನಾಳೆಯೇ ಸ್ವೀಕರಿಸಲು ಸಿದ್ಧ,” ಎಂದು ಪುತ್ತಿಲ ಹೇಳಿದ್ದಾರೆ. “ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಕರೆಮಾಡಿದರು ಎಂದು ಹೇಳಲಾಗುತ್ತಿದೆ, ಆದರೆ ನನಗೆ ಯಾವುದೇ ಕರೆ ಬಂದಿಲ್ಲ,” ಎಂದರು.
ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡ ಕೆಲವರಿಗೆ ಈಗಾಗಲೇ ಪಕ್ಷ ಜವಾಬ್ದಾರಿ ನೀಡಿರುವುದನ್ನು ಅವರು ಸ್ವೀಕರಿಸಿದರೂ, ಕಾರ್ಯಕರ್ತರ ಪರವಾಗಿ ಜವಾಬ್ದಾರಿಯನ್ನು ಕೇಳಿದ್ದ ತಮಗೆ ಮಾತ್ರ ಅದನ್ನು ನೀಡದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಜವಾಬ್ದಾರಿ ದೊರೆತಲ್ಲಿ ತಾವು ಸಂಘಟನೆ ಬಲಪಡಿಸುವಲ್ಲಿ ಬದ್ಧರಾಗಿದ್ದು, ಮತ್ತೆ ಪುತ್ತೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು. “ಚುನಾವಣೆಗೆ ಯಾರು ನಿಂತರೂ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ಕಾರ್ಯಕರ್ತರ ಒಲವು ಯಾರ ಮೇಲಿದೆಯೋ ಅವರು ಪುತ್ತೂರಿಗೆ ಬೇಕಾದ ಅಭ್ಯರ್ಥಿ,” ಎಂದು ಪುತ್ತಿಲ ಅಭಿಪ್ರಾಯಪಟ್ಟರು.
ಪಕ್ಷದ ಜವಾಬ್ದಾರಿಗೆ ಮತ್ತೆ ಒತ್ತಾಯ ಸೂಚಿಸಿದ ಅರುಣ್ ಕುಮಾರ್ ಪುತ್ತಿಲ, ಕಾರ್ಯಕರ್ತರ ನಿಲುವಿಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.



