• ಕುಕ್ಕೆಯ ಮಣ್ಣಿನಲ್ಲಿ ಆಡುವುದು ಕ್ರೀಡಾಳುಗಳ ಸೌಭಾಗ್ಯ**

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ರಾಜ್ಯಾದ್ಯಂತ ಅಪಾರ ಭಕ್ತರನ್ನು ಹೊಂದಿದೆ. ಶ್ರೀ ಕ್ಷೇತ್ರದ ಪಾವನ ಮಣ್ಣಿನಲ್ಲಿ ಆಟವಾಡುವುದು ಕ್ರೀಡಾಳುಗಳ ಸೌಭಾಗ್ಯ. ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಳುಗಳು ಕ್ಷೇತ್ರಕ್ಕೆ ಆಗಮಿಸುವ ಮೂಲಕ ಇದೀಗ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಪಿ.ಯು ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆವ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ- ಬಾಲಕಿಯರ ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಶಾಂತಿ ಮತ್ತು ಸೌಹಾರ್ದತೆಗಳ ಔನ್ನತ್ಯಕ್ಕೆ ರಹದಾರಿಯಾಗಿದೆ.ಕ್ರೀಡಾಳುಗಳು ಕ್ರೀಡಾ ಸ್ಪೂರ್ತಿಯ ಮನೋಭಾವನೆ ಬೆಳೆಸಿಕೊಳ್ಳಬೇಕು.ಶ್ರಮದೊಂದಿಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮಹೋನ್ನತ ದೃಷ್ಠಿಕೋನ ಅತ್ಯಗತ್ಯ ಎಂದರು.
ಕುಕ್ಕೆಯಲ್ಲಿ ಕ್ರೀಡೆಗೂ ಪ್ರೋತ್ಸಾಹ:
ಕುಕ್ಕೆ ದೇವಳವು ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಪುಣ್ಯ ಕ್ಷೇತ್ರದಲ್ಲಿ ನಡೆವ ಕ್ರೀಡಾಹಬ್ಬವು ಸಾಫಲ್ಯತೆಯನ್ನು ಸಾಧಿಸುವ ಮೂಲಕ ಕ್ರೀಡೆಗೆ ಜಯ ಲಭಿಸಲಿ.ಪಂದ್ಯಾಟವನ್ನು ಶಿಸ್ತು ಬದ್ಧವಾಗಿ ಆಯೋಜನೆ ಮಾಡಿದ ಸಂಸ್ಥೆಯ ಪ್ರಾಚಾರ್ಯರು ಮತ್ತು ಅವರ ತಂಡ ನೈಜವಾಗಿಯೂ ಶ್ಲಾಘನೆಗೆ ಅರ್ಹರು ಎಂದು ಹರೀಶ್. ಎಸ್.ಇಂಜಾಡಿ ಹೇಳಿದರು.
ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ವಿಭಾಗದ ದ.ಕ ಜಿಲ್ಲಾ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್.,ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಯುತ್ತ ಗೌಡ ಬಳ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ವೀಕ್ಷಕ ಗೋಪಾಲಕೃಷ್ಣ, ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಜಾಜ್೯, ಕಾರ್ಯದರ್ಶಿ ಮಮತಾ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಪ್ರೌಢಶಾಲಾ ವಿಭಾಗದ ಮುಖ್ಯಗುರು ನಂದಾ ಹರೀಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್. ಎಸ್, ಕ್ರೀಡಾ ಕಾರ್ಯದರ್ಶಿ ಧನುಶ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಗುಣವರ್ಧನ ಕೆದಿಲ ಮತ್ತು ಸದಸ್ಯರು ವೇದಿಕೆಯಲ್ಲಿದ್ದರು.
ಧ್ವಜ ವಂದನೆ:
ಪದವಿಪೂರ್ವ ಕಾಲೇಜು ವಿಭಾಗದ ದ.ಕ ಜಿಲ್ಲಾ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್. ಧ್ವಜ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನಿವೇದಿತಾ ಕ್ರೀಡಾ ಪ್ರತಿಜ್ಞೆ ನೆರವೇರಿಸಿದರು. ಉಪನ್ಯಾಸಕಿಯರಾದ ಶ್ರುತಿ ಅಶ್ವತ್ಥ್ ಮತ್ತು ಸೌಮ್ಯಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.ರಾಜ್ಯದ 27ಕ್ಕೂ ಅಧಿಕ ಬಾಲಕರ ತಂಡ ಹಾಗೂ 25 ಕ್ಕೂ ಅಧಿಕ ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದೆ.

Leave a Reply

Your email address will not be published. Required fields are marked *