ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ
ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಯ ವಿಚಾರದಲ್ಲಿ,ದೇವಳದ ಎದುರು ಇರುವ ಸಭಾಭವನದ ಕಟ್ಟಡ ತೆರವು ಮಾಡುವಲ್ಲಿ ಗೊಂದಲವಿದ್ದರೆ ಇನ್ನೊಂದು ಪ್ರಶ್ನಾಚಿಂತನೆ ಮಾಡೋಣ. ಅದು ಕೂಡಾ ಇದಕ್ಕೆ ಟಚ್ ಇಲ್ಲದ ದೈವಜ್ಞರನ್ನೇ ಕರೆಸಿ ಪ್ರಶ್ನಾ ಚಿಂತನೆ ಇಟ್ಟು ಮುಂದುವರಿಯೋಣ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾ‌ರ್ ರೈ ಅವರು ಹೇಳಿದರು.

ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ವಿಚಾರದಲ್ಲಿ ದೇವಳದ ಸಭಾಭವನದಲ್ಲಿ ನಡೆದ ಭಕ್ತರ, ಗ್ರಾಮ ಸಮಿತಿ ಮತ್ತು ದೇವಳಗಳ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭಾಭವನ ತೆರವು ಮಾಡುವ ಮತ್ತು ಉಳಿಸಿಕೊಳ್ಳುವ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯ ಕೊನೆಯಲ್ಲಿ ಮಾತನಾಡಿದ ಅಶೋಕ್‌ ಕುಮಾ‌ರ್ ರೈಯವರು, ಇನ್ನೊಮ್ಮೆ ಪ್ರಶ್ನಾಚಿಂತನೆ ಮಾಡೋಣ.ಯಾರ ಒತ್ತಡವೂ ಬೇಡ.ಒನ್ ಟು ಒನ್ ಪ್ರಶ್ನೆಯನ್ನು ಕೇಳೋಣ. ಪ್ರಶ್ನೆ ಚಿಂತನೆ ಮಾಡಿ ಇದಕ್ಕೆ ಅಂತಿಮ ನಿರ್ಣಯ ಪಡೆಯುವುದು ಉತ್ತಮ ಎಂದು ಹೇಳಿದರು.ಭಕ್ತಾದಿಗಳು ಕರತಾಡನದ ಮೂಲಕ ಸಹಮತ ವ್ಯಕ್ತಪಡಿಸಿದರು.

ಸಭಾಭವನ ತೆರವಿಗೆ ಪ್ರಶ್ನಾ ಚಿಂತನೆಯಲ್ಲಿ ಸೂಚನೆ ಬಂದರೆ ಅದನ್ನು ಮಾಡೋಣ ಎನ್ನುವುದು ನನ್ನ ಅನಿಸಿಕೆ.ಈ ಹಾಲ್‌ನ ಆಚೆ ಬದಿಯಲ್ಲಿ 600 ಮಂದಿ ಸೇರುವ ಹಾಲ್‌ ನಿರ್ಮಾಣ ಮಾಡೋಣ ಎಂದು ಹೇಳಿದ ಶಾಸಕರು,ಒಂದುವೇಳೆ ಪ್ರಶ್ನಾಚಿಂತನೆ ಇಡದೆ ಜೀರ್ಣೋದ್ಧಾರ, ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕೊನೆಗೆ ಪ್ರಶ್ನೆ ಇಟ್ಟಾಗ ಮತ್ತೆ ಇದೇ ಕಟ್ಟಡದ ಸಮಸ್ಯೆ ಎದುರಾಗಬಾರದು.ಹಾಗಾಗಿ ಮತ್ತೊಮ್ಮೆ ಪ್ರಶ್ನೆ ಚಿಂತನೆ ಸೂಕ್ತ ಎಂದರು.ಮುಂದೆ ದೇವಳಕ್ಕೆ ಸ್ಮಶಾನದ ಬಳಿಯಲ್ಲಿ ಜಾಗ ಖರೀದಿ ಮಾಡಲೂ ಇದೆ ಎಂದವರು ಹೇಳಿದಾಗ ಭಕ್ತರು ಕರತಾಡನ ಮೂಲಕ ಸಹಮತ ವ್ಯಕ್ತಪಡಿಸಿದರು.ಗ್ರಾಮದ ಎಲ್ಲಾ ಸಮಿತಿಯನ್ನು ಸೇರಿಸಿಕೊಂಡು 2 ವರ್ಷದಲ್ಲಿ ದೇವಳದ ಜೀರ್ಣೋದ್ದಾರ ಕೆಲಸ ಕಾರ್ಯ ಮುಗಿಸಬೇಕು.ಡ್ರೈನೇಜ್ ಸಿಸ್ಟಮ್,ಎಸ್‌ಟಿಪಿ ಪ್ಲಾಂಟ್ ಸಹಿತ ಎಲ್ಲಾ ವ್ಯವಸ್ಥೆ ಆಗಬೇಕಾಗಿದೆ.ಇದಕ್ಕೆ ಹಣದ ಜೋಡಣೆಯೂ ಆಗಬೇಕು.ಒಂದಷ್ಟು ಕಮಿಟಿ, ಉಪಸಮಿತಿ, ಜೀರ್ಣೋದ್ಧಾರ ಸಮಿತಿ ಜೊತೆಗೆ ಬ್ರಹ್ಮಕಲಶ ಸಮಿತಿ ಮಾಡಿ ಎರಡು ವರ್ಷದಲ್ಲಿ ಎಲ್ಲಾ ಕಾರ್ಯ ಪೂರ್ಣಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಒಟ್ಟು ನಮ್ಮ ಕಲ್ಪನೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜನ ಹೆಚ್ಚು ಬರಬೇಕು. ಇಡೀ ವಿಶ್ವದಲ್ಲೇ ಮಹಾಲಿಂಗೇಶ್ವರನ ಭಕ್ತರು ಇದ್ದಾರೆ.ಮುಂದಿನ ದಿನ ಕಂಬಳ ಸಮಿತಿ ಮೀಟಿಂಗ್ ಮಾಡಿ ಕಂಬಳದ ಗದ್ದೆಯನ್ನು ಸ್ಥಳಾಂತರಿಸುತ್ತೇವೆ.ದೇವಳದ ಅಯ್ಯಪ್ಪ ಗುಡಿ,ನಾಗನ ಗುಡಿಯ ಸ್ಥಳಾಂತರ ತಕ್ಷಣ ಮಾಡಲಾಗುವುದು.ಭಕ್ತರು ತಮ್ಮ ವಿಚಾರ ಏನಾದರೂ ಇದ್ದರೆ ನೇರವಾಗಿ ತಿಳಿಸಿ.ಅದರ ಬದಲು ವಾಟ್ಸಪ್‌ನಲ್ಲಿ ಬರೆದು ಹಾಕುವ ವಿಚಾರ ಮಾಡಬೇಡಿ.ಒಟ್ಟು ನಾವೆಲ್ಲ ಸೇರಿ ಮಹಾಲಿಂಗೇಶ್ವರ ದೇವರ ಅಭಿವೃದ್ಧಿ ಕೆಲಸದಲ್ಲಿ ಪಾಲ್ಗೊಳ್ಳೋಣ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಮತ್ತು ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ, ದೇವಾಲಯ ಅಭಿವೃದ್ಧಿ ಆಗಬೇಕು.ಇದರಲ್ಲಿ ಎರಡು ಮಾತಿಲ್ಲ. ಇಲ್ಲಿ ಭಕ್ತರಿಗೆ ಏನು ಅನುಕೂಲ ಕಲ್ಪಿಸಬೇಕು ಎಂಬುದು ಮುಖ್ಯ.ದಕ್ಷಿಣ ಕನ್ನಡದಲ್ಲಿ ಜಾತ್ರೆಯ ಸಂದರ್ಭ 1 ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುವುದು ಪುತ್ತೂರಿನಲ್ಲಿ ಮಾತ್ರ.ಹೂದೋಟ, ಕಟ್ಟಡ ನಿರ್ಮಾಣ ಮಾಡಿದರೆ ಗದ್ದೆಯಲ್ಲಿ ಭಕ್ತರು ಎಲ್ಲಿ ನಿಲ್ಲುವುದು.ಈಗಾಗಲೇ ಬೇರೆ ಕಡೆ ದೇವಸ್ಥಾನಗಳಲ್ಲಿ ಕಾಲ್ತುಳಿತ ಆಗಿರುವ ಸುದ್ದಿಯಿದೆ.ಹಾಗಾಗಿ ಇಲ್ಲಿ ವಿಶಾಲವಾದ ಸ್ಥಳ ಬೇಕು.ಈ ಗದ್ದೆಯನ್ನು ಯಾಕೆ ಅಕ್ಟೇರ್ ಮಾಡಿದ್ದು ಎಂಬುದರ ದಾಖಲೆ ನನ್ನಲ್ಲಿ ಇದೆ.ಕಂಬಳದ ಗದ್ದೆ ಮಾತ್ರ ದೇವಳದ್ದು, ಉಳಿದ ಜಾಗವನ್ನು ನಾವು ಖರೀದಿಸಿದ್ದು. ಅದನ್ನು ಖರೀದಿ ಮಾಡುವಾಗ ರಥ ಬೀದಿ, ಕಲ್ಯಾಣ ಮಂಟಪಕ್ಕೆ ಎಂಬುದು ಇದೆ. ಕಲ್ಯಾಣ ಮಂಟಪ ಆಗುವಾಗ ಕೆಲವು ವಿಘ್ನಸಂತೋಷಿಗಳು ಅಡ್ಡ ಬಂದಿದ್ದರು. ಆಗ ಬೆಂಗಳೂರಿನಿಂದ ಧಾರ್ಮಿಕ ತಜ್ಞರು ಬಂದು ಕಲ್ಯಾಣ ಮಂಟಪಕ್ಕೆ ಸೂಕ್ತ ಸ್ಥಳ ಎಂದು ತಿಳಿಸಿದ್ದಾರೆ.ದೇವಸ್ಥಾನದ ಎದುರು ಸಾರ್ವಜನಿಕ ರಸ್ತೆಯಿದೆ.ಆದ್ದರಿಂದ ಕಲ್ಯಾಣ ಮಂಟಪ ದೇವಳದ ಪರಿಧಿಯಿಂದ ಹೊರಗಿದೆ. ಒಂದು ವೇಳೆ ದೇವರಿಗೆ ಅಡ್ಡ ಆಗುತ್ತದೆ ಎಂಬುದಾದರೆ ಕೊಲ್ಲೂರು, ಕಟೀಲ್, ಸುಬ್ರಹ್ಮಣ್ಯದಲ್ಲಿ ಬಿಲ್ಡಿಂಗ್ ಇಲ್ವಾ?.ಅಲ್ಲಿ ಯಾವುದು ಅಡ್ಡ ಎಂದು ಪ್ರಶ್ನಿಸಿದರು. ಹಿಂದೆ ಶಿವನ ಮೂರ್ತಿ ಅಡ್ಡ ಎಂದು ತೆರವು ಮಾಡಿದರು. ಅದಾದ ಬಳಿಕ ಗೋಪುರ ನಿರ್ಮಾಣ ಆಗಿದೆ.ಅದು ಅಡ್ಡ ಆಗುವುದಿಲ್ಲವಾ?,ಈ ಕಟ್ಟಡ ಮಾಡಿದ ಬಳಿಕ ದೇವಸ್ಥಾನದ ಆದಾಯ ಜಾಸ್ತಿಯಾಗಿದೆ ಎಂದ ಅವರು, ದಾಖಲೆಗಳ ಆಧಾರದಲ್ಲಿಯೇ ನಾನು ಮಾತನಾಡುತ್ತಿದ್ದೇನೆ.ನನ್ನ ಅವಧಿಯಲ್ಲಿ ಉಡುಪಿ ಬಿಟ್ಟರೆ ಪುತ್ತೂರಿನಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳು ನಡೆದಿರುವುದು.ಈ ಕಟ್ಟಡ ಕಟ್ಟಲು ರೂ.2 ಕೋಟಿಗಿಂತಲೂ ಜಾಸ್ತಿ ಖರ್ಚಾಗಿದೆ.ಇದು ದೇವಸ್ಥಾನಕ್ಕೆ ಸಂಬಂಧಿಸಿದ್ದು,ಹಾಗಾಗಿ ಇದನ್ನು ತೆರವು ಮಾಡುವ ಕಾರ್ಯ ಕೈಬಿಡಬೇಕೆಂದರು.

ಒಂದೊಂದು ಅಷ್ಟಮಂಗಲದಲ್ಲಿ ಒಂದೊಂದು ರೀತಿಯ ವಿಚಾರ ಬರುತ್ತಿದೆ.ಮೂಡಿತ್ತಾಯರು ಅಧ್ಯಕ್ಷರಾಗಿ ಇರುವಾಗ ಆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಟ್ಟಡ ಅಡ್ಡ ಎಂದು ಹೇಳಿಲ್ಲ.ನಾಗನ ಗುಡಿ ಕೂಡಾ ವಾಸ್ತುವಿನ ಮೂಲಕವೇ ನಿರ್ಮಾಣ ಆಗಿದೆ.ಆದರೆ ಅಯ್ಯಪ್ಪನ ಗುಡಿಗೆ ನಾವು ಜವಾಬ್ದಾರರಲ್ಲ.ಅಲ್ಲಿ ಅಯ್ಯಪ್ಪನ ಗುಡಿ ಕಟ್ಟಲು ಜಾಗ ಕೊಡುವುದಿಲ್ಲ ಎಂದಾಗ ಸರಕಾರದಿಂದ ಆದೇಶ ತರಿಸಿ ಅಯ್ಯಪ್ಪನ ಗುಡಿ ಕಟ್ಟಿದ್ದಾರೆ. ಇವತ್ತು ಅವೆಲ್ಲಕ್ಕೂ ಸಾನಿಧ್ಯವಿದೆ.ಹಾಗಾಗಿ ಯಾವುದನ್ನೂ ತೆರವು ಮಾಡುವ ಮೊದಲು ಎರಡೆರಡು ಬಾರಿ ಚಿಂತನೆ ಮಾಡಿಕೊಳ್ಳಿ.ಯಾರಿಗೂ ದೋಷ ಬರಬಾರದು.ದೇವಸ್ಥಾನದ ಹಿಂಬದಿ ಎಷ್ಟು ಬೇಕಾದರೂ ಅಭಿವೃದ್ಧಿ ಮಾಡಿ ಎಂದು ಹೇಳಿದ ಎನ್‌.ಕೆ.ಜಗನ್ನಿವಾಸ್ ರಾವ್, ಕಟ್ಟಡಕ್ಕೆ ಹತ್ತು ಜನರ ದುಡ್ಡು ಇದೆ.ಹಾಗಾಗಿ ಇನ್ನೊಮ್ಮೆ ತಾಂಬೂಲ ಪ್ರಶ್ನೆಯ ಬದಲು ಅಷ್ಟಮಂಗಲ ಪ್ರಶ್ನೆ ಮಾಡಿ ಎಂದರು.ಉತ್ತರಿಸಿದ ಶಾಸಕರು ಪ್ರಶ್ನೆಯಲ್ಲಿ ಈ ಕಟ್ಟಡವನ್ನು ತೆಗೆಯಬೇಕೆಂದು ಬಂದಿದೆ.ಕೊನೆಗೆ ಈ ಕಟ್ಟಡವನ್ನು ಉಳಿಸಿಕೊಳ್ಳಲು ಆಗುತ್ತದೆಯೋ ಎಂದು ಕೇಳಿದ್ದೆವು. ಉಳಿಸಿಕೊಳ್ಳಲು ಆಗುವುದೇ ಇಲ್ಲ ಎಂದು ದೈವಜ್ಞರು ತಿಳಿಸಿದ್ದಾರೆ.ಎದುರು ಕಡೆ ಯಾವುದೇ ಕಟ್ಟಡ ಹಾಕುವ ಯೋಜನೆ ಮಾಸ್ಟರ್ ಪ್ಲಾನ್‌ನಲ್ಲಿ ಇಲ್ಲ ಎಂದರು. ಈ ಕುರಿತು ಇನ್ನೊಮ್ಮೆ ಪ್ರಶ್ನೆ ಇಟ್ಟು ಚಿಂತನೆ ಮಾಡಿಕೊಳ್ಳಿ ಎಂದು ಹೇಳಿ ಎನ್‌.ಕೆ.ಜಗನ್ನಿವಾಸ್ ರಾವ್ ಅವರು ಸಭೆಯಿಂದ ತೆರಳಿದರು.

ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ ಅವರು ಮಾತನಾಡಿ,ಹಿಂದೆ ಶರ್ಮರು ಪ್ರಶ್ನೆ ಚಿಂತನೆಯಲ್ಲಿ ಈ ಜಾಗದಲ್ಲಿ ಕಲ್ಯಾಣ ಮಂಟಪ ಕಟ್ಟಲು ಯಾರು ಹೇಳಿದ್ದು ಎಂದು ಮೊಕ್ತಸರರಲ್ಲೇ ಪ್ರಶ್ನೆ ಮಾಡಿದ್ದಾರೆ. ಈ ಕಟ್ಟಡಕ್ಕೆ 20 ವರ್ಷ ಆಗಿದೆ.ಇದರ ಮೇಲಿನ ಅಂತಸ್ತಿಗೆ ಯಾರು ಹೋಗುವುದೂ ಇಲ್ಲ. ಇಲ್ಲಿ ಸಭಾಭವನ ಕಟ್ಟಡ ಆದ ಬಳಿಕ ಎಷ್ಟೋ ಕಲ್ಯಾಣ ಮಂಟಪ ಪೇಟೆಯಲ್ಲಿ ಆಗಿದೆ.ಆದರೆ ಇಲ್ಲಿ ಮಾತ್ರ ಈ ಕಟ್ಟಡ ಪೂರ್ಣ ಆಗುವುದೇ ಇಲ್ಲ.ಇದರಲ್ಲಿ ಮಾತ್ರ ಈ ಕಟ್ಟಡ ಪೂರ್ಣ ಆಗುವುದೇ ಇಲ್ಲ.ಇದರಲ್ಲಿ ಇನ್‌ಕಮ್ ಕೂಡಾ ಇಲ್ಲ. ಪ್ರಶ್ನೆಯಲ್ಲಿ ತೆರೆವು ಮಾಡಬೇಕೆಂದು ಹೇಳಿದರೂ ನಾವು ಅದನ್ನು ಇಟ್ಟುಕೊಂಡಿದ್ದೇವೆ. ಆದಷ್ಟು ಬೇಗ ಇದನ್ನು ತೆರವು ಮಾಡಿದರೆ ತೊಂದರೆ ಪರಿಹಾರ ಆಗಬಹುದು ಎಂದರಲ್ಲದೆ,ನನಗೇನೂ ಈ ಕಟ್ಟಡದ ಮೇಲೆ ಮತ್ಸರ ಇಲ್ಲ.ಈ ಕಟ್ಟಡಕ್ಕೆ ರೂ. 3.50 ಕೋಟಿ ಖರ್ಚು ಆಗಿರಬಹುದು. ಅದನ್ನು ಜಗನ್ನಿವಾಸ ರಾವ್ ಅವರಿಂದಲೇ ವಸೂಲು ಮಾಡಬೇಕು. ಅವರು ಕೇಳದೆ ಈ ಕಟ್ಟಡ ಮಾಡಿದ್ದು ಎಂದು ಆರೋಪಿಸಿದರು.ದಯವಿಟ್ಟು ಪರಿಚಯ ಇಲ್ಲದ ದೈವಜ್ಞರನ್ನು ಕರೆಸಿ ಪ್ರಶ್ನೆ ಇಡುವುದು ಉತ್ತಮ ಎಂದು ಅವರು ಹೇಳಿದಾಗ ಸಭೆಯಲ್ಲಿ ಕರತಾಡನ ಕೇಳಿ ಬಂತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ದಾರ ಸಮಿತಿ ಸದಸ್ಯರೂ ಆಗಿರುವ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ಈ ಹಿಂದೆ ದೇವರ ಭೂಸ್ಪರ್ಶ ಆಗುವ ಸಂದರ್ಭಅಷ್ಟಮಂಗಲ ಪ್ರಶ್ನೆಗೆ ದೇವರ ಸೂಚನೆಯಾಗಿತ್ತು.ನಮ್ಮ ಅವಧಿಯಲ್ಲಿ ಅಷ್ಟಮಂಗಲ ಪ್ರಶ್ನೆ ನೆರವೇರಿಸಿದ್ದೆವು.ಆಗ ಕಲ್ಯಾಣ ಮಂಟದದ ವಿಚಾರವೂ ಬಂತು ಆದರೆ ಪರಿಹಾರವನ್ನೂ ದೈವಜ್ಞರು ನೀಡಿದ್ದರು.ಅದರಂತೆ ಕಲ್ಯಾಣ ಮಂಟಪಕ್ಕೆ ಪರಿಧಿಯನ್ನು ಮಾಡಲಾಯಿತು.ಸಭಾಭವನವನ್ನು ನವೀಕರಿಸಲಾಯಿತು.ಪ್ರಶ್ನೆಯಲ್ಲಿ ಒಬ್ಬೊಬ್ಬರು ಒಂದೊಂದು ವಿಚಾರ ತಿಳಿಸುವುದೇ ಇಲ್ಲಿ ಸಮಸ್ಯೆ ಆಗಿದೆ. ಇವತ್ತು ಹೊಸ ಹೊಸ ಕಲ್ಯಾಣ ಮಂಟಪ ಅಲ್ಲಲ್ಲಿ ಆಗಿರುವುದರಿಂದ ಇಲ್ಲಿಗೆ ಜನ ಬರುತ್ತಿಲ್ಲ.ಭಕ್ತರ ಭಾವನೆಗೆ ಪೂರಕವಾಗಿ, ಕಲ್ಯಾಣ ಮಂಟಪ ಶಿವನಿಗೆ ಅಡ್ಡವಾಗಿದೆ ಎಂದು ಕಟ್ಟಡ ತೆರವು ಮಾಡುವ ಬದಲು ಮೇಲಿನ ಗೋಡೆಯನ್ನು ತೆರವು ಮಾಡಬಹುದು ಎಂದು ಸಲಹೆ ನೀಡಿದರು.

ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖರಾಗಿರುವ ಹರಿಪ್ರಸಾದ್ ನೆಲ್ಲಿಕಟ್ಟೆಯವರು ಮಾತನಾಡಿ, ದೇವಸ್ಥಾನದ ಜೀರ್ಣೋದ್ದಾರದ ಸಂದರ್ಭಬಲಭಾಗದ ದೇವಿಯ ಗುಡಿಯನ್ನು ಹಿಂಬದಿಗೆ ಪ್ರತಿಷ್ಠೆ ಮಾಡಲಾಯಿತು.ರಕೇಶ್ವರಿ ದೇವಿಯನ್ನು ಹೊರಾಂಗಣದಲ್ಲಿ ಇರಿಸಲಾಯಿತು.ಆದರೆ ಮತ್ತೆ ಚಿಂತನೆ ಬಳಿಕ ದೇವಿಯನ್ನು ಒಳಗೆ ಇರಿಸಲಾಯಿತು.ಶಿವನ ಮೂರ್ತಿಯ ಪ್ರಶ್ನೆಯನ್ನು ನೋಡಿದಾಗ ಅದನ್ನು ತೆರವು ಮಾಡಲಾಯಿತು.ಹೀಗೆ ಒಬ್ಬೊಬ್ಬರು ಪ್ರಶ್ನಾಚಿಂತಕರು, ವಾಸ್ತು ತಜ್ಞರು ಒಂದೊಂದು ವಿಚಾರ ತಿಳಿಸುತ್ತಾರೆ. ಈಗ ಅದು ಆಗಬಾರದು.ಎಲ್ಲವನ್ನೂ ಪ್ರಶ್ನೆ ಚಿಂತನೆಯಲ್ಲಿ ಕೇಳಿಯೇ ಮಾಡುವುದು.ಆದರೆ ಇದರಲ್ಲಿ ಯಾವುದು ಸರಿ?. ಎಂದು ಪ್ರಶ್ನಿಸಿದರಲ್ಲದೆ, ಎಲ್ಲಾ ಪ್ರಶ್ನಾಚಿಂತಕರನ್ನು ವಾಸ್ತುತಜ್ಞರಲ್ಲಿ ಮತ್ತು ಭಕ್ತಾಧಿಗಳನ್ನು ಮಾತನಾಡುವುದು ಒಳಿತು ಎಂದರು.ಇವತ್ತು ಸುಬ್ರಹ್ಮಣ್ಯ, ಕಟೀಲ್‌, ಧರ್ಮಸ್ಥಳ ಬಿಟ್ಟರೆ ಪುತ್ತೂರು ದೇವಸ್ಥಾನ ಅನ್ನದಾನ ಸೇವೆಯಲ್ಲಿ ಪ್ರಸಿದ್ಧಿ ಪಡೆದಿದೆ.ಮುಂದಿನ ದಿನ ದೇವಸ್ಥಾನದಲ್ಲಿ ಕೆರೆ ಅಭಿವೃದ್ಧಿ, ಸುತ್ತು ಕಂಪೌಂಡ್ ನಿರ್ಮಾಣ ಮಾಡಬೇಕು.ಇಲ್ಲವಾದರೆ ಇಲ್ಲಿ ಬರುವ ದನಗಳ ಕಳವು ಕೂಡಾ ಆಗುತ್ತದೆ.ಒಟ್ಟಿನಲ್ಲಿ ಭಕ್ತರ ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ಪಡೆಯಬೇಕು ಎಂದರು.ದೇವಳದ ಅನ್ನಛತ್ರ ದೇವಸ್ಥಾನದಿಂದ ಎತ್ತರದಲ್ಲಿದೆ ಎಂದವರು ಹೇಳಿದಾಗ ಉತ್ತರಿಸಿದ ಮುಳಿಯ ಕೇಶವಪ್ರಸಾದ್‌ ಅವರು, ಕಟ್ಟಡ ದೇವಸ್ಥಾನದಿಂದ ಎತ್ತರಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಈಶ್ವರ ಭಟ್‌ ಪಂಜಿಗುಡ್ಡೆ,ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಶಿವನಾಥ ರೈ ಮೇಗಿನಗುತ್ತು,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ನಳಿನಿ ಪಿ ಶೆಟ್ಟಿ,ಕೃಷ್ಣವೇಣಿ, ಈಶ್ವರ ಬೆಡೇಕ‌ರ್, ವಿನಯ ಸುವರ್ಣ,ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ, ನಿವೃತ್ತ ಎಸ್ಪಿ ರಾಮದಾಸ ಗೌಡ,ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ,ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಶಿವಪ್ರಸಾದ್‌ ಶೆಟ್ಟಿ, ಪ್ರಸಾದ್‌ಕೌಶಲ್ ಶೆಟ್ಟಿ, ಶಿವರಾಮ್ ಆಳ್ವ, ಅಮರನಾಥ ಗೌಡ ಬಪ್ಪಳಿಗೆ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಮುರಳಿಧರ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು, ಸುರೇಶ್ ಕಲ್ಲಾರೆ, ಸಂತೋಷ್ ಭಂಡಾರಿ, ಉಲ್ಲಾಸ್ ಕೋಟ್ಯಾನ್, ಲೋಕೇಶ್ ಪಡ್ಡಾಯೂರು ಸಹಿತ ನೂರಾರು ಮಂದಿ ಭಕ್ತರು, ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು, ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *