ಉಡುಪಿ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನ. 28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಭಾಗವಹಿಸುತ್ತಿರುವುದು ನಮಗೆ ಗೊತ್ತೇ ಇದೆ. ಈಗ ಆ ಕಾರ್ಯಕ್ರಮಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಅದರಂತೆ, ನ. 28ರಂದು ಶ್ರೀಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಮೋದಿಯವರು ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಡಿ, ಶ್ರೀಮಠದಲ್ಲಿ ನ. 30ರಂದು ನಡೆಯುವ ಸಂತ ಸಂಗಮ ಎಂಬ ಭಜನೋತ್ಸವದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಇದೇ ನ. 8 ರಿಂದ ಡಿ. 7 ರವರೆಗೆ ಗೀತಾ ಜಯಂತಿ ಪ್ರಯುಕ್ತ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನ. 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಲಕ್ಷ ಕಂಠ ಗೀತಾಪಾರಾಯಣ ಜರುಗಲಿದೆ ಎಂದು ನ. 6ರಂದು ಉಡುಪಿಯ ಗೀತಾಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದು, ನ. 8 ರಂದು ಸಂಜೆ 4:30 ಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೀತೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಹೊರಡಿಸಲಾಗಿರುವ ಕರಪತ್ರದಲ್ಲಿ ಗೀತಾ ಪಾರಾಯಣ, ಗೀತಾ ಮಹಾಯಾಗ, ಸಂತ ಸಂಗಮ, ಭಜನೋತ್ಸವ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ, ಸ್ಪರ್ಧೆಗಳು, ಗೀತಾ ಪ್ರಸ್ತುತಿ ಮತ್ತು ವಸ್ತು ಪ್ರದರ್ಶನ ಆಯೋಜಿಸಲಾಗಿ ತಿಳಿಸಲಾಗಿದೆ. ಇವುಗಳಲ್ಲಿ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದರೆ, ಸಂತ ಸಂಗಮ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿಯವರು ಉಡುಪಿಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. 2008ರಲ್ಲಿ ನಡೆದಿದ್ದ ಪರ್ಯಾಯ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.

ಉಡುಪಿಯಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳ ವಿವರ :

  • ನ. 28 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರವರೆಗೆ ಬೈಲಕೆರೆ ಮೈದಾನದಲ್ಲಿ ಲಕ್ಷ ಕಂಠ ಗೀತಾಪಾರಾಯಣದಲ್ಲಿ ಭಾಗಿ.
  • ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಕೃಷ್ಣ ಮಠಕ್ಕೆ ಆಗಮಿಸಿ, ಕೃಷ್ಣ ಮತ್ತು ಮುಖ್ಯಪ್ರಾಣರ ದರ್ಶನ.
  • ಸುವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ಚಿನ್ನದ ಕನಕ ಕವಚವನ್ನು ಉದ್ಘಾಟನೆ.
  • ಗೀತಾಮಂದಿರವನ್ನು ವೀಕ್ಷಿಸಿ, ಸಭಾ ವೇದಿಕೆಗೆ ಆಗಮನ.
  • ಗೀತೆಯ ಕೊನೆಯ 10 ಶ್ಲೋಕಗಳನ್ನು ಪಠಿಸುವ ಮೂಲಕ ಪಾರಾಯಣವನ್ನು ಕೃಷ್ಣನಿಗೆ ಸಮರ್ಪಣೆ.

Leave a Reply

Your email address will not be published. Required fields are marked *