ಬೆಳೂರು ತಾಲ್ಲೂಕಿನ ಅರೇಹಳ್ಳಿ ಮತ್ತು ಸುತ್ತಮುತ್ತಲಿನ ಮಲೆನಾಡು ಪ್ರದೇಶಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದರು. ಇತ್ತೀಚೆಗೆ ಕಾಫಿ ಬೆಲೆಯ ಏರಿಕೆಯಿಂದ ಸ್ವಲ್ಪ ನಿರಾಳತೆ ಕಾಣುತ್ತಿದ್ದ ಸಂದರ್ಭದಲ್ಲೇ ಖದೀಮರ ಅಟ್ಟಹಾಸ ಹೆಚ್ಚುತ್ತಿದ್ದು, ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಕಾಫಿ ಕಳವು ಮಾಡುವ ವೇಳೆ ಅದನ್ನು ತಡೆಯಲು ಯತ್ನಿಸಿದ ಬೆಳೆಗಾರನ ಮೇಲೆ ಖದೀಮರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ಕಾಫಿ ಕಳವು ಮಾಡಲು ಬಂದಿದ್ದ ಮೂರ್ನಾಲ್ಕು ಜನರ ಗುಂಪು, ಕಾರಿನಿಂದ ಹೊರಬರುತ್ತಿದ್ದ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ನಂತರ ಸ್ಥಳದಿಂದ ಸುಮಾರು 100 ಕೆ.ಜಿ. ಕಾಫಿ ಮತ್ತು ಹುಲಿ–ಕಾಡಾನೆ ಹಾವಳಿಯಿಂದ ರಕ್ಷಣೆಗಾಗಿ ಬಳಸುತ್ತಿದ್ದ ಬಂದೂಕನ್ನೂ ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




ಇದಕ್ಕೂ ಮೊದಲು, ಇದೇ ಖದೀಮರ ಗುಂಪು ಸುಮಾರು ₹2 ಲಕ್ಷ ಮೌಲ್ಯದ ಕಾಫಿಯನ್ನು ಕಳವು ಮಾಡಿದ್ದಾಗ, ಪೀಡಿತರು ಸ್ಥಳೀಯ ಕಾಫಿ ಬೆಳೆಗಾರ ಸಂಘದೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಮತ್ತೆ ಅದೇ ಗುಂಪು ಕಳವು ಮಾಡಲು ಮುಂದಾದದ್ದು, ಪೊಲೀಸರ ನಿಷ್ಕ್ರಿಯತೆಗೆ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿದೆ.

ಗಂಭೀರವಾಗಿ ಗಾಯಗೊಂಡ ಜಗನ್ನಾಥ್ ಶೆಟ್ಟಿಯವರನ್ನು ಮೊದಲು ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕಾಫಿ ಕಳವು ಗ್ಯಾಂಗ್ನ ಅಟ್ಟಹಾಸ ದಿನೇದಿನೇ ಮಿತಿಮೀರುತ್ತಿದ್ದರೂ, ಪೊಲೀಸ್ ಇಲಾಖೆ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ಅತ್ತ ಕೃಷಿಯ ರಕ್ಷಣೆಯೂ ಇಲ್ಲ, ಇತ್ತ ಜೀವದ ರಕ್ಷಣೆಯೂ ಇಲ್ಲ; ಹಾಗಾದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ..?” ಎಂಬ ಪ್ರಶ್ನೆಯನ್ನು ಜನರು ಸಾರ್ವಜನಿಕವಾಗಿ ಎತ್ತಿದ್ದಾರೆ.
ಈ ಕುರಿತು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.




