ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರ್ಯಪಡೆಯ ಕೇಂದ್ರ ಸ್ಥಾನ ಸುಳ್ಯದಲ್ಲಿ ಇರಲಿದೆ.

ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಹಾಗೂ ಸುಬ್ರಹ್ಮಣ್ಯ ವಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಪ್ರತಿ ವರ್ಷವೂ ಬೆಳೆ ಹಾನಿ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗುವ ಆನೆಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆ ಕರೆಸಬೇಕಾಗುತ್ತಿತ್ತು. ಇದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿತ್ತು.

ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆ ರಚಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ ಇದೀಗ ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು ಮಾಡಿದೆ.
ಈ ಕಾರ್ಯಪಡೆಯಲ್ಲಿ ಒಟ್ಟು 28 ಮಂದಿ ಸಿಬ್ಬಂದಿ ಇರಲಿದ್ದಾರೆ. ಒಬ್ಬ ಉಪವಲಯ ಅರಣ್ಯಾಧಿಕಾರಿ, ಇಬ್ಬರು ಗಸ್ತು ಅರಣ್ಯ ಪಾಲಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ 25 ಮಂದಿ ವಾಹನ ಚಾಲಕರು ಮತ್ತು ತತ್ಸಮಾನ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.
ಈ ತಂಡವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ ಪ್ರದೇಶಗಳು, ಕೃಷಿ ಭೂಮಿಗಳು ಹಾಗೂ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುವ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಆನೆಗಳ ಚಲನವಲನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಅರಣ್ಯ ಪ್ರದೇಶಗಳಿಗೆ ಅನಾವಶ್ಯಕವಾಗಿ ಪ್ರವೇಶಿಸದಂತೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ.
ಸುಳ್ಯದಲ್ಲಿರುವ ಕಾರ್ಯಪಡೆ ಕೇಂದ್ರದಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಅದರ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಪ್ರಕಟಿಸಲಾಗುತ್ತದೆ. ಆನೆ ಹಾವಳಿ ಪ್ರದೇಶಗಳಿಗೆ ತ್ವರಿತವಾಗಿ ತಲುಪಲು ಅಗತ್ಯ ವಾಹನಗಳು ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಈ ಕುರಿತು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *