ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಕೊಯಿಲ ಗ್ರಾಮದ ಅತೂರು ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಪಾದಚಾರಿಯೋರ್ವರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು ಕಡಬ ತಾಲೂಕಿನ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸಲಾಗಿದೆ. ಅವರು ಕಾಸರಗೋಡಿನ ಮೈಮಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಂಬಂಧಿಕರ ಮದರಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯವರೊಂದಿಗೆ ಆಗಮಿಸಿದ್ದ ಅವರು, ಅತೂರಿನಲ್ಲಿ ಬಸ್ಸಿನಿಂದ ಇಳಿದ ಬಳಿಕ ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿ, ತಾವು ನಡೆದುಕೊಂಡು ಕಾರ್ಯಕ್ರಮ ಸ್ಥಳದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಗೂಡ್ಸ್ ಟೆಂಪೋ ಪಾದಚಾರಿಯಾದ ಅಬ್ದುಲ್ ಖಾದರ್ ಸಖಾಫಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕಾರಣ ಮತ್ತು ಟೆಂಪೋ ಚಾಲಕನ ನಿರ್ಲಕ್ಷ್ಯ ಕುರಿತು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *