ನವದೆಹಲಿ: ನಿವೃತ್ತ ಯೋಧರ ಕಲ್ಯಾಣ ಸಂಬಂಧಿಸಿದ ಪ್ರಮುಖ ಸಮಸ್ಯೆಯನ್ನು ಲೋಕಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ECHS ಯೋಜನೆಯಡಿ ಮಾಜಿ ಸೈನಿಕר ಚಿಕಿತ್ಸಾ ವೆಚ್ಚ ಪಾವತಿ ವಿಳಂಬಕ್ಕೆ ರಕ್ಷಣಾ ಸಚಿವಾಲಯ ತುರ್ತಾಗಿ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಸೇವಾ ನಿವೃತ್ತ ಯೋಧರ ಪರವಾಗಿ ಮಾತನಾಡಿದ ಅವರು, ಬಿಲ್‌ಗಳ ದೀರ್ಘ ವಿಳಂಬ ಪಾವತಿಯಿಂದ ಖಾಸಗಿ ಆಸ್ಪತ್ರೆಗಳು ECHS ಯೋಜನೆಯಿಂದ ಹಿಂದೆ ಸರಿಯುತ್ತಿರುವುದನ್ನು ಗಂಭೀರ ಸಮಸ್ಯೆಯಾಗಿ ವಿವರಿಸಿದರು. ಇದರಿಂದ ದೇಶಕ್ಕಾಗಿ ಜೀವ ಮುಡಿಪಾಗಿಟ್ಟ ಯೋಧರು ಹಾಗೂ ಅವರ ಕುಟುಂಬಗಳು ಚಿಕಿತ್ಸೆಯಲ್ಲಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಕೊಡಗಿನ ಪರಿಸ್ಥಿತಿಯನ್ನು ಉದಾಹರಿಸಿದ ಸಂಸದರು, ಜಿಲ್ಲೆಯಲ್ಲಿ ECHS-ಗೆ ಲಭ್ಯವಿರುವ ಖಾಸಗಿ ಆಸ್ಪತ್ರೆಗಳ ಕೊರತೆಯಿಂದ ನಿವೃತ್ತ ಯೋಧರು 100–150 ಕಿ.ಮೀ ದೂರ ಪ್ರಯಾಣಿಸಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ECHS ಯೋಜನೆಯಡಿ ವಾರ್ಷಿಕ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳು ಚಿಕಿತ್ಸೆ ಪಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, “ಚಿಕಿತ್ಸಾ ವೆಚ್ಚ ಪಾವತಿ ವಿಳಂಬವು ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ. ರಕ್ಷಣಾ ಸಚಿವರು ತಕ್ಷಣ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು” ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *