ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿ ಹರಿದಾಡುತ್ತಿರುವ ಪೋಸ್ಟ್‌ಗಳ ಕುರಿತು ಬಿಜೆಪಿ ಯುವ ಮೋರ್ಚಾ ಪುತ್ತೂರು ಮಂಡಲದ ಅಧ್ಯಕ್ಷ ಯಮುನ್ ಬೋಜಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ್ದಾರೆ.

ಜನವರಿ 22 ರಂದು ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಖಾತೆಗಳ ಮೂಲಕ ಇಂತಹ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪೋಸ್ಟ್‌ಗಳಿಗೆ ತಮ್ಮ ಯಾವುದೇ ರೀತಿಯ ಸಂಬಂಧವಿಲ್ಲ, ತಾವು ಅಥವಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಇಂತಹ ಬರಹಗಳನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಅದರ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ, ಅಸಭ್ಯ ಭಾಷೆ ಬಳಕೆಯನ್ನು ಬಿಜೆಪಿ ಯುವ ಮೋರ್ಚಾ ಎಂದಿಗೂ ಸಮರ್ಥಿಸುವುದಿಲ್ಲ. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೌರವದ ಬಗ್ಗೆ ತಾವು ಸಂಪೂರ್ಣ ನಿಷ್ಠೆ ಹೊಂದಿದ್ದು, ಸಮಾಜದಲ್ಲಿ ಗೊಂದಲ ಹಾಗೂ ದ್ವೇಷ ಹುಟ್ಟಿಸುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತಮ್ಮ ಹೆಸರನ್ನು ಬಳಸಿ ತಪ್ಪು ಮಾಹಿತಿ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಯಮುನ್ ಬೋಜಾರ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನಕಲಿ ಪೋಸ್ಟ್‌ಗಳಿಗೆ ಮರುಳುಗೊಳ್ಳದೇ, ಮಾಹಿತಿ ಪರಿಶೀಲಿಸಿ ಮಾತ್ರ ಪ್ರತಿಕ್ರಿಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *