ಪುತ್ತೂರು : ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರು ಜಂಕ್ಷನ್ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಮಾರುತಿ ಸ್ವಿಫ್ಟ್ ಕಾರೊಂದು ನಿಲ್ಲಿಸಲಾಗಿದ್ದ ಮಾರುತಿ ಆಲ್ಟೋ ಕಾರು ಹಾಗೂ 5 ಬೈಕ್‍ಗಳಿಗೆ ಡಿಕ್ಕಿ ಹೊಡೆದು, ಆರೋಪಿ ಚಾಲಕ ಕಾರಿನೊಂದಿಗೆ ಪರಾರಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆಗೆ ಸಂಬಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಿಫ್ಟ್ ಕಾರು ಆರಂಭದಲ್ಲಿ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೈಕ್ ಸಹಸವಾರ ಬಂಟ್ವಾಳದ ನಿವಾಸಿ ರವಿ ಬಿ (27ವ) ಅವರು ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುರುವಾರ ಸಂಜೆ ಕಾರ್ತಿಕ್ ಎಂಬವರ ಬೈಕಿನಲ್ಲಿ (ಕೆಎಲ್-14 ಎಕ್ಸ್ 1092)ನಲ್ಲಿ ನಾನು ಸಹ ಸವಾರನಾಗಿ ಹಾಗೂ ಕಾರ್ತಿಕ್ ಅವರು ಸವಾರನಾಗಿ, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಜಂಕ್ಷನ್ ಬಳಿಗೆ ತಲುಪಿದಾಗ, ಹಿಂದಿನಿಂದ ಬಂದ ಕೆ.ಎ 04 ಎಂಎಲ್ 4745 ನೋಂದಣಿಯ ಕಾರನ್ನು ಅದರ ಚಾಲಕನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ನಾನು ಮತ್ತು ಸವಾರ ಕಾರ್ತಿಕ್ ಅವರು ರಸ್ತೆಗೆ ಎಸೆಯಲ್ಪಟ್ಟು ಗಾಯವಾಗಿದೆ. ಬಳಿಕ ಅಪಘಾತ ಎಸಗಿದ ಆರೋಪಿ ಕಾರು ಚಾಲಕ ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಎ 21 ಯು6042, ಕೆಎ 21 ಜೆ 3998, ಕೆಎ 19 ಇಪಿ 9907, ಕೆಎ 21 ಇಇ. 3526 ನಂಬ್ರದ ಬೈಕ್‍ಗಳಿಗೆ ಡಿಕ್ಕಿ ಹೊಡೆದಿದ್ದು, ಆ ಬೈಕ್‍ಗಳು ಜಖಂಗೊಂಡಿವೆ ಎಂದು ರವಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಪ್ಯ ಠಾಣೆಯ ಪೊಲೀಸರು ಆರೋಪಿ ಕಾರು ಚಾಲಕನ ವಿರುದ್ಧ ಕಲಂ 281, 125(ಎ) ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಕಲಂ: 134(ಎಬಿ) ಐಎಂವಿ ಆಕ್ಟ್‍ನಂತೆ ಪ್ರಕರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಚಾಲಕ ಅಪ್ರಾಪ್ತ ವಿದ್ಯಾರ್ಥಿ….!
ಆಲ್ಟೋ ಕಾರು ಮತ್ತು 5 ಬೈಕ್‍ಗಳಿಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಅರಿಯಡ್ಕ ಗ್ರಾಮ ವ್ಯಾಪ್ತಿಯ ಅಪ್ರಾಪ್ತ ಬಾಲಕನೆಂಬ ಮಾಹಿತಿ ಲಭಿಸಿದೆ. ಆರಂಭದಲ್ಲಿ ಮುಂದಿನಿಂದ ತೆರಳುತ್ತಿದ್ದ ಬೈಕೊಂದಕ್ಕೆ ಡಿಕ್ಕಿ ಹೊಡೆದ ವೇಳೆ ಆತ ಗಾಬರಿಗೊಂಡ ಪರಿಣಾಮವಾಗಿ ಕಾರು ನಿಯಂತ್ರಣ ಕಳಕೊಂಡು ಯದ್ವಾತದ್ವ ಚಲಿಸಿದೆ ಎಂದು ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *