ಬೆಂಗಳೂರು : ನಟ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ್ ಮೂಲದ ವಿಕಾಸ್ ಕುಮಾರ್ ಎಂದು ತಿಳಿದುಬಂದಿದೆ. ಆನ್‌ಲೈನ್ ಲಿಂಕ್ ಮೂಲಕ ಪ್ರಿಯಾಂಕಾ ಅವರ ವಾಟ್ಸಾಪ್ ಹ್ಯಾಕ್ ಮಾಡಿ, ಹಣ ವರ್ಗಾಯಿಸಲು ವಂಚಕರು ಸಂದೇಶ ಕಳುಹಿಸಿದ್ದರು.

ಇನ್ನು, ಪೊಲೀಸರ ತನಿಖೆ ವೇಳೆ ಬಿಹಾರದಲ್ಲಿ ಒಂದೇ ಊರಿನ 150ಕ್ಕೂ ಹೆಚ್ಚು ಯುವಕರು ಸೈಬರ್ ಅಪರಾಧದಲ್ಲಿ ತೊಡಗಿರುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಹೌದು ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು. ಆನ್​ಲೈನ್​ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್​ ಮಾಡಿದ್ದರು. ಈ ವೇಳೆ ಮೊಬೈಲ್​​ಗೆ ಲಿಂಕ್​ ಬಂದಿದ್ದು, ಆ ಲಿಂಕ್​ ಅನ್ನು ಪ್ರಿಯಾಂಕ ಕ್ಲಿಕ್​ ಮಾಡಿದ್ದರು. ಬಳಿಕ ನಟಿ ಪ್ರಿಯಾಂಕಾ ವಾಟ್ಸಾಪ್​ ಹ್ಯಾಕ್ ಮಾಡಿದ್ದ ಖದೀಮ, ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್​ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್​ನಿಂದ ಕರೆ ಮಾಡಿದ್ದರು.

ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್​ನಿಂದ ಆರೋಪಿ ಹಲವರಿಗೆ ಮೆಸೇಜ್​ ಮಾಡಿದ್ದು, ಈ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್​ಗೆ ಐವತ್ತು ಸಾವಿರ ಹಣಹಾಕಿದ್ದರು. ಇನ್ನು ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್​​ಗೆ ಕರೆ ಮಾಡಿದರೆ ಕಾಲ್​ ಕಟ್​​ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು.

ಆದರೆ, ಅದಾಗಲೇ ಸೈಬರ್​ ವಂಚಕನ ಅಕೌಂಟ್​​ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್​ ಆದ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಆರೋಪಿ ಬಿಹಾರದ ದಶರತಪುರದ ನಿವಾಸಿ ಎನ್ನುವುದು ಗೊತ್ತಾಗಿತ್ತು.ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್​ ಖದೀಮರ ಜಾಲ ನೋಡಿ ಶಾಕ್​ ಆಗಿದ್ದಾರೆ. 20ರಿಂದ 25 ವಯಸ್ಸಿನ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದು, ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಷಯ ಈ ವೇಳೆ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *