ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆ ನೋಡಲು ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ. ಇನ್ನು ಸೆಲೆಬ್ರಿಟಿಗಳಿಗೂ ಇಂತಹ ಪರಿಷೆ, ಜಾತ್ರೆಯನ್ನು ಜನಸಾಮಾನ್ಯರಂತೆ ಕಣ್ತುಂಬಿಕೊಳ್ಳಬೇಕು ಅನ್ನೋ ಆಸೆ ಇರುತ್ತೆ. ಆದರೆ ಜನ ನೋಡಿದ್ರೆ ಗುಂಪು ಕಟ್ಟಿಕೊಳ್ಳೋದು ಗ್ಯಾರಂಟಿ ಅಂತ ಆ ಸಾಹಸಕ್ಕೆ ಕೈಹಾಕೋದಿಲ್ಲ.
ಆದರೆ ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಯಾರಿಗೂ ಗೊತ್ತಾಗದಂತೆ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಬಂದಿದ್ದಾರೆ.



ಹೌದು, ರಚಿತಾ ರಾಮ್ ಜನಸಾಮಾನ್ಯರೊಡನೆ ಕಡಲೆಕಾಯಿ ಪರಿಷೆಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಜಾತ್ರೆಯಲ್ಲಿ ಸಿಗುವ ಮುಖವಾಡ ಧರಿಸಿ, ಯಾರಿಗೂ ಮುಖ ತೋರಿಸದೆ ಪರಿಷೆಯನ್ನು ಎಂಜಾಯ್ ಮಾಡಿದ್ದಾರೆ. ಈ ವಿಡಿಯೋಗಳನ್ನು ರಚಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಹಾಯ್, ಎಲ್ರಿಗೂ ನಾನೀಗ ಕಡಲೆಕಾಯಿ ಪರಿಷೆಯಲ್ಲಿದ್ದೀನಿ, ಹೇಗಿದೆ ನನ್ನ ಗೆಟಪ್ ಎಂದು ರಚಿತಾ ರಾಮ್ ಕೇಳಿದ್ದಾರೆ. ಎಷ್ಟೋ ವರ್ಷಗಳು ಆದ್ಮೇಲೆ ಕಡಲೆಕಾಯಿ ಪರಿಷೆಗೆ ಬಂದು ಈ ತರ ನಡೆಯೋದು ಇದೆಯಲ್ಲ ಇದು ಸಿಕ್ಕಾಪಟ್ಟೆ ಬ್ಯೂಟಿಫುಲ್” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಮಸ್ಕಾರ, ಇವತ್ತು ನನ್ನ ಸಿನಿಮಾ “ಕ್ರಿಮಿನಲ್” ಕಾರ್ಯಕ್ರಮ ಮುಗಿಸಿಕೊಂಡು ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಹೋಗಿದ್ದು ಹೀಗೆ, ಎಷ್ಟು ಮಜಾ ಮಾಡಿದಿನಿ ಗೊತ್ತಾ? ಈ ಟೀಂ ಹೊಂದಿರುವುದಕ್ಕೆ ನಾನು ನಿಜಕ್ಕೂ ಧನ್ಯ. ನನಗೆ ಮುಖವಾಡ ಕೊಡಿಸಿದ್ದಕ್ಕೆ ವರುಣ್ ಗೌಡ ಅವರಿಗೆ ಧನ್ಯವಾದ ಎಂದು ರಚಿತಾ ಖುಷಿಪಟ್ಟಿದ್ದಾರೆ.


ನಾನು ಮತ್ತು ನನ್ನ ಬಾಯ್ಸ್ 18 ವರ್ಷಗಳ ನಂತರ ನಾನು ಮತ್ತೆ ಕಡಲೆಕಾಯಿ ಪರಿಷೆಗೆ ಬಂದಿದ್ದೇನೆ. ಇದು ಎಂತಹ ಅದ್ಭುತವಾದ ಅನುಭವ ಗೊತ್ತಾ? ನಾವು ಕಡಲೆಕಾಯಿ ಪರಿಷೆಯಲ್ಲಿ ಒಂದಷ್ಟು ಮಂದಿಯ ಜೊತೆ ಸೆಲ್ಫೀಗಳನ್ನು ತಗೊಂಡ್ವಿ. ಆದರೆ ಅವರಿಗೆ ನಾನೇ ರಚಿತಾ ಎನ್ನುವುದು ತಿಳಿಯಲೇ ಇಲ್ಲ. ನನ್ನ ಜೊತೆ ಸೆಲ್ಫಿ ತೆಗೆದುಕೊಂಡಿರುವರು ದಯವಿಟ್ಟು ನನ್ನ ಟ್ಯಾಗ್ ಮಾಡಿ ಎಂದು ರಚಿತಾ ಸರ್‌ಪ್ರೈಸ್ ನೀಡಿದ್ದಾರೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಸವನಗುಡಿ ಕಡಲೆಕಾಯಿ ಪರಿಷೆಯು ಪ್ರತಿ ವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗುತ್ತದೆ. ಈ ಬಾರಿ ಐದು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಈ ಬಾರಿಯ ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಯುತ್ತಿದ್ದು, ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಕೂಡ ಇಲ್ಲಿಗೆ ಕಡಲೆಕಾಯಿ ಮಾರಾಟದಲ್ಲಿ ತೊಡಗಿದ್ದಾರೆ.
ಈ ಬಾರಿ ಪರಿಷೆಗೆ ಮತ್ತಷ್ಟು ಮೆರುಗು ನೀಡಲು, ಮೈಸೂರು ದಸರಾ ಮಾದರಿಯಲ್ಲಿ ಇಡೀ ಪ್ರದೇಶಕ್ಕೆ ವಿಶೇಷ ದೀಪಾಲಂಕಾರವನ್ನು ವ್ಯವಸ್ಥೆಗೊಳಿಸಲಾಗಿದೆ. ಇದು ಪರಿಷೆಯ ಸೌಂದರ್ಯವನ್ನು ಹೆಚ್ಚಿಸಿದೆ. ರೈತರು ಹಾಗೂ ವ್ಯಾಪಾರಿಗಳ ಹಿತ ಕಾಯಲು ಕಳೆದ ಒಂದು ವರ್ಷದಿಂದ ಕಡಲೆಕಾಯಿ ವ್ಯಾಪಾರಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ವಿಧಿಸದೆ, ಅವರಿಗೆ ವ್ಯಾಪಾರ ಮಾಡಲು ಸಂಪೂರ್ಣ ಉಚಿತ ವ್ಯವಸ್ಥೆಯೂ ಕಲ್ಪಿಸಲಾಗಿದೆ.


