ಪುತ್ತೂರು / ಉಪ್ಪಿನಂಗಡಿ:
ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಿ, ಕಳವಾಗಿದ್ದ ಆಂಬುಲೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಕಡಬ ತಾಲೂಕಿನ ಶಿರಾಡಿ ನಿವಾಸಿ ಸುರೇಶ್ (46) ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆಂಬುಲೆನ್ಸ್ ಕಳವು ಪ್ರಕರಣ ದಾಖಲಾಗಿತ್ತು. ದೂರುದಾರ ಸುರೇಶ್ ಅವರು KA-19-C-7557 ಸಂಖ್ಯೆಯ ಆಂಬುಲೆನ್ಸ್‌ನ ಚಾಲಕರಾಗಿದ್ದು, ಪ್ರತಿದಿನ ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿ ಮನೆಗೆ ತೆರಳುತ್ತಿದ್ದರು.

ದಿನಾಂಕ 19-12-2025ರ ರಾತ್ರಿ ಕೂಡ ಅದೇ ರೀತಿಯಲ್ಲಿ ಆಂಬುಲೆನ್ಸ್ ನಿಲ್ಲಿಸಿ, ಅಪಘಾತದ ತುರ್ತು ಕರೆ ಬಂದಲ್ಲಿ ಬದಲಿ ಚಾಲಕರ ಅನುಕೂಲಕ್ಕಾಗಿ ಆಂಬುಲೆನ್ಸ್‌ನ ಕೀಯನ್ನು ವಾಹನದಲ್ಲೇ ಇಟ್ಟು ಹೋಗಿದ್ದರು. ಆದರೆ ಮರುದಿನ 20-12-2025ರ ಬೆಳಗ್ಗೆ ಬಂದು ನೋಡಿದಾಗ ಆಂಬುಲೆನ್ಸ್ ನಿಲ್ಲಿಸಿದ್ದ ಸ್ಥಳದಲ್ಲಿ ಇರದೇ ಕಳವಾಗಿರುವುದು ಪತ್ತೆಯಾಯಿತು.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2025, ಕಲಂ 303(2) BNS 2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ತನಿಖೆಯ ವೇಳೆ ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ದಿನಾಂಕ 20-12-2025ರಂದು ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋಧನ್ (22) ಎಂಬ ಆರೋಪಿಯನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ನಂತರ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವಾಗಿದ್ದ ಆಂಬುಲೆನ್ಸ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *