ನೆಲ್ಯಾಡಿ:ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಪೇಟೆಯ ಮಧ್ಯಭಾಗದಲ್ಲಿ ಬುಧವಾರ ಸಂಜೆ ಸರಣಿ ಅಪಘಾತ ಸಂಭವಿಸಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ನೆಲ್ಯಾಡಿಯ ಗಣೇಶ್ ಸ್ಟೋರ್ ಬಳಿ ನಿಲ್ಲಿಸಿದ್ದ ಉಜಿರೆ ಮಹಾವೀರ ಸಂಸ್ಥೆಗೆ ಸೇರಿದ ಲೈನ್ ಸೇಲ್ಸ್ ಈಚರ್ ಗಾಡಿ, ಪಶು ಆಹಾರ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ಗೆ ಎಸ್‌ಎಲ್‌ವಿ ಸಂಸ್ಥೆಗೆ ಸೇರಿದ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಈಚರ್ ಲಾರಿ ನೇರವಾಗಿ ಗಣೇಶ್ ಸ್ಟೋರ್ ಅಂಗಡಿಗೆ ನುಗ್ಗಿ ಭೀತಿಯ ವಾತಾವರಣ ನಿರ್ಮಾಣವಾಯಿತು.




ಘಟನೆಯಲ್ಲಿ ಮೂರು ವಾಹನಗಳು ಗಂಭೀರವಾಗಿ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾನಿಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸರಾಗಗೊಳಿಸಿದರು.




