ಕಡಬ ತಾಲೂಕು ಮಟ್ಟದ ಪ್ರಥಮ ತುಳು ಸಮ್ಮೇಳನ ಉದ್ಘಾಟನೆ
ಕಡಬ / ಕೇಪು:
ತುಳುನಾಡಿನ ತಾಯಿ ಭಾಷೆಯಾಗಿರುವ ತುಳುವಿಗೆ ಎಷ್ಟೇ ಗೌರವ ನೀಡಿದರೂ ಅದು ಕಡಿಮೆಯೇ. ಅರ್ಹತೆಯ ಆಧಾರದಲ್ಲಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಭಾನುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳು ಕೂಟ ಹಾಗೂ ನೂಜಿಬಾಳ್ತಿಲ ತೆಗ್ರ್ ತುಳು ಕೂಟಗಳ ಆಶ್ರಯದಲ್ಲಿ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ವಠಾರದಲ್ಲಿ ನಡೆದ ಕಡಬ ತಾಲೂಕಿನ ಪ್ರಥಮ ತುಳು ಸಮ್ಮೇಳನವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.




ಉಜಿರೆಗೆ ಪ್ರಧಾನಮಂತ್ರಿ ಆಗಮಿಸಿದ ಸಂದರ್ಭದಲ್ಲಿ ಹಾಗೂ ರಾಜ್ಯಸಭೆಯಲ್ಲಿ ಎರಡು ಬಾರಿ ತುಳು ಭಾಷೆಗೆ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದೇನೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿಯವರು, ಇತರೆ ಭಾಷೆಗಳಿಗೂ ಇಂತಹ ಬೇಡಿಕೆಗಳಿದ್ದು, ಅರ್ಹತೆಯ ಆಧಾರದಲ್ಲಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ದಿಕ್ಕಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎಂದು ಡಾ. ಹೆಗ್ಗಡೆ ಹೇಳಿದರು.

ತುಳು ಭಾಷೆಗೆ ದೊಡ್ಡ ಸಾಂಸ್ಕೃತಿಕ ಗೌರವವಿದೆ. ವ್ಯವಹಾರಿಕವಾಗಿ ಬೇರೆ ಭಾಷೆ ಬಳಸಿದರೂ ಎಲ್ಲಾ ಜಾತಿ–ಮತ–ಧರ್ಮದವರು ತುಳು ಮಾತನಾಡುತ್ತಾರೆ. ಮುಂದಿನ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಶಾಲಾ–ಕಾಲೇಜುಗಳಲ್ಲಿ ತುಳು ಕಲಿಕೆಗೆ ಆದ್ಯತೆ ನೀಡಬೇಕು. ತುಳುವಿನ ಬಗ್ಗೆ ಇರುವ ಕೀಳರಿಮೆಯನ್ನು ದೂರ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.


ತುಳು ಉಳಿಸಲು ಬಳಕೆ ಅಗತ್ಯ: ಒಡಿಯೂರು ಶ್ರೀಗಳು
ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ನಡಕ್ಕೂ ಸರಿಯಾದ ನೆಲೆ ಇಲ್ಲದ ಇಂದಿನ ಕಾಲದಲ್ಲಿ ತುಳು ಸಮ್ಮೇಳನಗಳು ಭಾಷೆಯನ್ನು ಜೀವಂತವಾಗಿಡುವ ಕಾರ್ಯ ಮಾಡುತ್ತಿವೆ ಎಂದರು. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಂತೆ; ಬಳಕೆಯಲ್ಲಿದ್ದಾಗಲೇ ಅವು ಗಟ್ಟಿಯಾಗಿರುತ್ತವೆ. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದರೆ 8ನೇ ಪರಿಚ್ಛೇದಕ್ಕೆ ಸೇರಿಸುವುದು ಸುಲಭವಾಗಲಿದೆ ಎಂದು ಹೇಳಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಮ್ಮೇಳನಾಧ್ಯಕ್ಷ ಕೆ. ಸೇಸಪ್ಪ ರೈ ರಾಮಕುಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, 2500 ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಗೆ ಮಾನ್ಯತೆ ಸಿಗದಿರುವುದು ದುರಂತ. ತುಳುವಿಗೆ ರಾಜಾಶ್ರಯ ದೊರಕದಿದ್ದರೆ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ಜಿಲ್ಲೆಯ 14 ಶಾಸಕರು ಗಟ್ಟಿ ಧ್ವನಿಯಲ್ಲಿ ತುಳು ಪರವಾಗಿ ನಿಲ್ಲಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಕಂಬಳ, ಕೋಳಿಕಟ್ಟ, ದೈವದ ನೇಮ ತುಳುನಾಡಿನ ಸಂಸ್ಕೃತಿಯ ಭಾಗ. ಇವುಗಳಿಗೆ ಅಡಚಣೆ ಮಾಡುವುದು ಸರಿಯಲ್ಲ. ಕೋಳಿಕಟ್ಟನ್ನು ಅಧಿಕೃತಗೊಳಿಸಲು ಎಲ್ಲರ ಒಮ್ಮತ ಅಗತ್ಯ, ವಿಶೇಷವಾಗಿ ಮಹಿಳೆಯರ ಅಭಿಪ್ರಾಯವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ತುಳುನಾಡಿನ ಮರೆಯಾಗುತ್ತಿರುವ ಸಂಸ್ಕೃತಿಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಬೈತಮೊಟ್ಟೆ, ಜಾನುವಾರು ಕೊಟ್ಟಿಗೆ, ಕಂಬಳದ ಕೋಣ, ಆಚಾರಿ ಕೊಟ್ಯ, ಮಡಿಕೆ ತಯಾರಿ, ಆಯುರ್ವೇದ ಗಿಡಮೂಲಿಕೆಗಳು, ಹಳೆಯ ಉಪಕರಣಗಳು, ಪುಸ್ತಕ ಮಳಿಗೆ, ಹಳೆಯ ನೋಟು–ನಾಣ್ಯಗಳ ಪ್ರದರ್ಶನ, ತುಳು ಗೊಬ್ಬುದ ಕಲಾ ಪ್ರದರ್ಶನಗಳು ಗಮನ ಸೆಳೆದವು. ವೇದಿಕೆಯನ್ನು ತೆಂಗಿನ ಗರಿ ಹಾಗೂ ತಾಳೆ ಮರದ ಈರೋಳಿನಿಂದ ಶೃಂಗರಿಸಲಾಗಿತ್ತು. ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ, ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಉದ್ಯಮಿ ರವೀಂದ್ರನಾಥ ಎಂ. ಭಂಡಾರಿ, ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಕುಟ್ರುಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಮನಾ, ಸಾಹಿತಿಗಳು, ವೈದ್ಯರು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಚಿತಾ ಮತ್ತು ಬಳಗದವರು ತುಳು ಗೀತೆ ಹಾಡಿದರು.
ಸ್ವಾಗತವನ್ನು ಕೇಪು ಶಿವರಾಮ ಶೆಟ್ಟಿ, ಪ್ರಸ್ತಾವನೆಯನ್ನು ಉಮೇಶ್ ಶೆಟ್ಟಿ ಸಾಯಿರಾಮ್, ವಂದನೆಯನ್ನು ಗಿರಿಶಂಕರ ಸುಲಾಯ ಸಲ್ಲಿಸಿದರು.
ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.
