ಪುತ್ತೂರು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ತೀರ್ಪುಗಾರನ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ‘ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಾಟದಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಕಾನಾ ಹಾಗೂ ಕೆಜಿಎಫ್ ತಂಡಗಳ ನಡುವೆ ನಡೆಯುತ್ತಿದ್ದ ಸೆಮಿಫೈನಲ್ ಪಂದ್ಯಕ್ಕೆ ಮಂಗಳೂರಿನ ರೋಲನ್ ಪಿಂಟೋ ಅವರು ತೀರ್ಪುಗಾರರಾಗಿದ್ದರು.

ಪಂದ್ಯಾಟದ ವೇಳೆ ಎಲ್‌ಬಿಡಬ್ಲ್ಯೂ (LBW) ತೀರ್ಪನ್ನು ನಿಯಮಾನುಸಾರ ನೀಡಿದ್ದ ರೋಲನ್ ಪಿಂಟೋ ಅವರ ತೀರ್ಪನ್ನು ಪ್ರಶ್ನಿಸಿ, ಹೊರಗಿನಿಂದ ಬಂದ ಕೆಲ ಯುವಕರು ಮೈದಾನಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪಂದ್ಯಾಟ ಕೈತಪ್ಪುವ ಹಂತಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಸಂಶಯಕ್ಕೆ ಕಾರಣವಾಗಿದೆ.

ಸೆಮಿಫೈನಲ್ ಪಂದ್ಯಾಟದ ವೇಳೆ ವ್ಯಾಪಕ ಬೆಟ್ಟಿಂಗ್ ನಡೆದಿರುವ ಸಾಧ್ಯತೆ ಇದ್ದು, ಕೆಲ ಯುವಕರ ಬೆಟ್ಟಿಂಗ್ ವಿಫಲವಾದ ಹಿನ್ನೆಲೆಯಲ್ಲಿ ತೀರ್ಪುಗಾರನ ಮೇಲೆ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಪಂದ್ಯಗಳಲ್ಲಿ ಅಕ್ರಮ ಬೆಟ್ಟಿಂಗ್ ಕೂಡ ಜೋರಾಗಿದೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರತಿಷ್ಠಿತ ಕ್ರಿಕೆಟ್ ತಂಡಗಳ ನಡುವಿನ ಕಾದಾಟವಾಗಿದ್ದರಿಂದ ಈ ಪಂದ್ಯಕ್ಕೆ ಹೆಚ್ಚಿನ ಜನ ಸೇರಿದ್ದರು. ಇದೇ ವೇಳೆ ಅಂಪೈರ್ ತೀರ್ಪನ್ನು ಪ್ರಶ್ನಿಸಿ ನಡೆದ ಹಲ್ಲೆ ಕ್ರೀಡಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆ ಇದ್ದು, ಪೊಲೀಸರು ಪ್ರಕರಣದ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *