ಪುತ್ತೂರು: ಪುತ್ತೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯೊಂದು ಹೊರಡಿಸಿರುವ ಪ್ರಕಟಣೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಿರ್ಗತಿಕರು ಹಾಗೂ ಭಿಕ್ಷುಕರು ಕಂಡುಬಂದಲ್ಲಿ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿದ್ದರೂ, ಪ್ರಕಟಣೆ ರೂಪಿಸುವ ಹಾಗೂ ಅಂಟಿಸುವ ರೀತಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಪುತ್ತೂರು ತಾಲೂಕು ಕಚೇರಿಯ ಆವರಣದಲ್ಲಿ ಆರು ಕಡೆಗಳಲ್ಲಿ ಪ್ರಕಟಣೆ ಅಂಟಿಸಲಾಗಿದೆ. ಆದರೆ ಈ ಪ್ರಕಟಣೆಗಳನ್ನು ಕನ್ನಡದಲ್ಲಿ ನೀಡದೆ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆದು ಅಂಟಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಇಲಾಖೆಯೊಂದು ಸ್ಥಳೀಯ ಭಾಷೆಯನ್ನು ಕಡೆಗಣಿಸಿ ಇಂಗ್ಲಿಷ್ ಬಳಕೆ ಮಾಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವ ಸ್ಥಳಗಳಲ್ಲಿ ಪ್ರಕಟಣೆ ಅಂಟಿಸಬೇಕಾಗಿದ್ದರೂ, ತಾಲೂಕು ಕಚೇರಿಯ ಹಿಂಬದಿಯ ಗೋಡೆಗಳಲ್ಲಿ ಪ್ರಕಟಣೆ ಅಂಟಿಸಿರುವುದು ಮತ್ತೊಂದು ಎಡವಟ್ಟು ಎಂದು ಟೀಕಿಸಲಾಗಿದೆ. ಭಿಕ್ಷುಕರು ಹಾಗೂ ನಿರ್ಗತಿಕರು ಹೆಚ್ಚಾಗಿ ಕಾಣಸಿಗುವ ದೇವಸ್ಥಾನಗಳ ಹೊರಭಾಗ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆ ಅಂಟಿಸಬೇಕಾಗಿದ್ದರೂ, ಅಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.



ಈ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಬಾಲಚಂದ್ರ ಸೊರಕೆ, ಸಮಾಜ ಕಲ್ಯಾಣ ಇಲಾಖೆಯ ಈ ರೀತಿಯ ನಡೆ ಅಸಂಬದ್ಧ ಹಾಗೂ ಅಜಾಗರೂಕತೆಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಈಗಾಗಲೇ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಸರಿಯಾದ ಸಾಂತ್ವನ ಕೇಂದ್ರಗಳಿಲ್ಲದೆ ಅವರು ಪರದಾಡುತ್ತಿರುವ ಸ್ಥಿತಿ ಇರುವ ನಡುವೆ, ಇಲಾಖೆ ಈ ರೀತಿ ಪ್ರಕಟಣೆ ಹೊರಡಿಸಿರುವುದು ವಿಪರ್ಯಾಸಕರವಾಗಿದೆ ಎಂದಿದ್ದಾರೆ.


ಒಂದು ಕಡೆ ಕನ್ನಡ ಭಾಷೆಯನ್ನು ಬಳಸದೆ ಇಂಗ್ಲಿಷ್ನಲ್ಲಿ ಪ್ರಕಟಣೆ ನೀಡಿ ಗೊಂದಲ ಸೃಷ್ಟಿಸಿದ್ದು, ಮತ್ತೊಂದೆಡೆ ಪ್ರಕಟಣೆ ಅಂಟಿಸಬೇಕಾದ ಸರಿಯಾದ ಸ್ಥಳಗಳಲ್ಲಿ ಅಂಟಿಸದೇ ಅಚಾತುರ್ಯ ತೋರಿಸಿರುವುದು ಇಲಾಖೆಯ ಕಾರ್ಯವೈಖರಿಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಇಲಾಖೆಯ ಈ ‘ಇಂಗ್ಲಿಷ್ ಪ್ರೇಮ’ ಹಾಗೂ ಅವಾಂತರದ ವಿರುದ್ಧ ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಇಲಾಖೆಯು ಕನ್ನಡ ಭಾಷೆಯಲ್ಲಿ ಸ್ಪಷ್ಟ ಮಾಹಿತಿಯೊಂದಿಗೆ ಸೂಕ್ತ ಸ್ಥಳಗಳಲ್ಲಿ ಪ್ರಕಟಣೆ ಅಂಟಿಸಿ, ಭಿಕ್ಷುಕರು ಮತ್ತು ನಿರ್ಗತಿಕರಿಗೆ ನೈಜ ನೆರವು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.


