ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು (ರಿ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ಸಹಯೋಗದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ಕಡಬದ ಅಮೃತ ಸರೋವರದಲ್ಲಿ ನಡೆಯಿತು.




ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಅಧ್ಯಕ್ಷ ಕರುಣಾಕರ ಗೋಗಟೆ ಉದ್ಘಾಟಿಸಿ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಭವನಿ ಶಂಕರ್ ವಹಿಸಿದ್ದರು.


ಕಡಬ ತಾಲೂಕಿನ ಆರು ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರಿಗೆ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಚಿಂತನೆಯಿಂದ ರೂಪುಗೊಂಡ ಶೌರ್ಯ ವಿಪತ್ತು ನಿರ್ವಹಣಾ ಘಟಕವು ಸ್ಥಳೀಯ ಮಟ್ಟದಲ್ಲಿ ಸರ್ಕಾರದ ವ್ಯವಸ್ಥೆಯೊಂದಿಗೆ ಕೈಜೋಡಿಸಿ ವಿಪತ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸಲು ಪೂರಕವಾದ ವಿನೂತನ ಯೋಜನೆಯಾಗಿದೆ. ಘಟಕದ ಸದಸ್ಯರು ಸೇವಾಮನೋಭಾವದಿಂದ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.

ಉಪ ಅರಣ್ಯಾಧಿಕಾರಿ ಚಿದಾನಂದ ಅವರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯವನ್ನು ಶ್ಲಾಘಿಸಿ, ಅರಣ್ಯ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನೆಲ್ಯಾಡಿ ವಲಯದ ಉಪ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಶಿವಪ್ರಸಾದ್ ಮೈಲೇರಿ, ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಗೌಡ ಎ, ಕಡಬ ವಲಯ ಒಕ್ಕೂಟ ಅಧ್ಯಕ್ಷ ರಮೇಶ್ ರೈ ಅರ್ಪಜೆ ಅವರು ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಡಬ ಒಕ್ಕೂಟ ಅಧ್ಯಕ್ಷೆ ನಳಿನಿ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀಶ ಬಂಗೇರ, ಮೋಹನ್ ಕೆರೆಕ್ಕೋಡಿ, ಕಡಬ ವಲಯ ಭಜನಾ ಪರಿಷತ್ ಅಧ್ಯಕ್ಷ ರಮೇಶ್ ಅಡಿಲು, ಜನಜಾಗೃತಿ ವೇದಿಕೆ ಸದಸ್ಯರು, ವಿವಿಧ ಒಕ್ಕೂಟಗಳ ಅಧ್ಯಕ್ಷರು, ಸಂಘದ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕಡಬ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಡಬ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಮೇಲ್ವಿಚಾರಕ ವಿಜೇಶ್ ಜೈನ್ ವಂದಿಸಿದರು. ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು.


