ಮಂಗಳೂರು: ಬಂಟ್ವಾಳ ತಾಲೂಕಿನ ಅರಳ ಮತ್ತು ಪುತ್ತೂರಿನ ಕುಂಬ್ರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಎಂಬ ಕಾರ್ಯಕ್ರಮವೂ ದೇಶದ್ರೋಹದ ಕಾರ್ಯಕ್ರಮವಾಗಿರುತ್ತದೆ.ಕಾರ್ಯಕ್ರಮಕ್ಕೆ ಅನುಮತಿ ನೀಡುವುದನ್ನು ಎಸ್‌ಡಿಪಿಐ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ.




ಈ ಕುರಿತು ಹೇಳಿಕೆ ನೀಡಿರುವ ಅವರು, “ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಮತ್ತು ಕೋಮು ಪ್ರಚೋದನೆ ನೀಡುವ ಇಂತಹ ಸಭೆಗಳು ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುವ ವ್ಯವಸ್ಥಿತ ಸಂಚಾಗಿದೆ. ಈ ಹಿಂದೆಯೂ ಇಂತಹ ಹಲವಾರು ಸಂವಿಧಾನ ವಿರೋಧಿ ಸಭೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇಲಾಖೆಯ ಈ ಮೃದು ಧೋರಣೆಯಿಂದಾಗಿಯೇ ಇಂತಹ ದೇಶವಿರೋಧಿ ಚಟುವಟಿಕೆಗಳು ರಾಜಾರೋಷವಾಗಿ ಮುಂದುವರಿಯುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರ ಎಂದು ಬಿಂಬಿಸುವುದು ದೇಶದ್ರೋಹದ ಅಡಿಯಲ್ಲಿ ಅಕ್ಷಮ್ಯ ಅಪರಾಧವಾಗಿದೆ. ಒಂದು ವೇಳೆ ಮುಸ್ಲಿಮರು, ಕ್ರೈಸ್ತರು ಅಥವಾ ಸಿಖ್ಖರು ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾದ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಸಭೆಗಳನ್ನು ನಡೆಸಲು ಮುಂದಾದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅದಕ್ಕೆ ಅನುಮತಿ ನೀಡುತ್ತದೆಯೇ? ಖಂಡಿತ ಇಲ್ಲ. ಹಾಗಿದ್ದ ಮೇಲೆ, ದೇಶದ ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸುವ ಇಂತಹ ‘ಹಿಂದೂ ರಾಷ್ಟ್ರ’ ಸಭೆಗಳಿಗೆ ಇಲಾಖೆ ಹೇಗೆ ಮೌನ ಸಮ್ಮತಿ ನೀಡುತ್ತಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ಬಂಟ್ವಾಳ ಪುತ್ತೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಸಭೆಗೆ ಇಲಾಖೆ ಅನುಮತಿ ನೀಡಲೇ ಬಾರದು. ಜಿಲ್ಲೆಯ ದಕ್ಷ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಈ ಸಂಚಿನ ಹಿಂದಿರುವ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಶಾಂತಿ ಕದಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ಸಂವಿಧಾನದ ಮೌಲ್ಯಗಳನ್ನು ಗೌರವಿಸುವ ಸಮಾನ ಮನಸ್ಕ ನಾಗರಿಕರೊಂದಿಗೆ ಸೇರಿ ಎಸ್‌ಡಿಪಿಐ ಬೀದಿಗಿಳಿದು ಹೋರಾಟ ಮಾಡಲಿದೆ,ಸಮಾಜದ ಸಾಮರಸ್ಯಕ್ಕೆ ಭಂಗ ತರುವ ಯಾವುದೇ ಪ್ರಯತ್ನ ನಡೆದರೆ ಅದರ ವಿರುದ್ಧದ ತೀವ್ರ ಹೋರಾಟಕ್ಕೆ ನಮ್ಮ ಪಕ್ಷ ಸನ್ನದ್ಧವಾಗಿದೆ ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಸಿದ್ದಾರೆ.



