ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಮುಂಡೂರು ಗ್ರಾಮದ ನಿವಾಸಿ ಹಾಗೂ ಯುವ ಕಾಂಗ್ರೆಸ್ ನಾಯಕ ಸುಪ್ರಿತ್ ಕಣ್ಣಾರಾಯ ಅವರನ್ನು ನೇಮಕ ಮಾಡಲಾಗಿದೆ.




ಸೋಮವಾರ ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖರ ಸಭೆಯಲ್ಲಿ ಶಾಸಕ ಅಶೋಕ್ ರೈ ಅವರು ಈ ನೇಮಕಾತಿಯನ್ನು ಘೋಷಿಸಿದರು. ಸಭೆಯಲ್ಲಿ ಒಮ್ಮತದಿಂದ ಸುಪ್ರಿತ್ ಕಣ್ಣಾರಾಯ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಸುಪ್ರಿತ್ ಕಣ್ಣಾರಾಯ ಅವರು ಈ ಹಿಂದೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಘಟಕದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು, ಮುಂದಿನ ದಿನಗಳಲ್ಲಿ ಪುತ್ತೂರು ಬ್ಲಾಕ್, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್‌ಗಳ ಸಾಮಾಜಿಕ ಜಾಲತಾಣ ಘಟಕಗಳಿಗೆ ಪ್ರತ್ಯೇಕ ಅಧ್ಯಕ್ಷರನ್ನು ನೇಮಕ ಮಾಡಲಾಗುವುದಲ್ಲದೆ, ಪ್ರತಿಯೊಂದು ವಲಯ ಮತ್ತು ಬೂತ್ ಮಟ್ಟದಲ್ಲೂ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನು ನೇಮಕ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಈ ನೇಮಕಾತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಚಟುವಟಿಕೆಗಳು ಇನ್ನಷ್ಟು ಬಲಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.



