ಉಪ್ಪಿನಂಗಡಿ: ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನ ಕುರಿತ ಚರ್ಚೆ ತೀವ್ರವಾಗುತ್ತಿರುವ ನಡುವೆಯೇ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಹಾಗೂ ಅದರ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.




ಉಪ್ಪಿನಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲ್ಲ ಎಂದು ಹೇಳುತ್ತಿರುವುದಾಗಿ, ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಸಿಎಂ ಆಗದೇ ಬಿಡೋದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.


ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, “ಕಾಂಗ್ರೆಸ್‌ನ ಹೈಕಮಾಂಡ್ ಜೀವವಿಲ್ಲದಂತಾಗಿದೆ. ಎಐಸಿಸಿ ಸತ್ತಂತೆ ಬದುಕುತ್ತಿದೆ. ಬಹುಶಃ ಹೈಕಮಾಂಡ್ ಐಸಿಯುನಲ್ಲಿದೆ. ಸಿಎಂ ಸ್ಥಾನ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ,” ಎಂದು ಕಿಡಿಕಾರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಇದೆಯೇ? ಹೈಕಮಾಂಡ್ ಎಂದರೆ ಯಾರು? ಅಧ್ಯಕ್ಷರೇ ಅಲ್ಲವೇ?” ಎಂದು ಪ್ರಶ್ನಿಸಿದರು.
ಎರಡೂವರೆ ವರ್ಷದ ಸಿಎಂ ಅಗ್ರಿಮೆಂಟ್ ವಿಚಾರವನ್ನು ಉಲ್ಲೇಖಿಸಿ, “ಅದು ಲಿಖಿತವೋ ಅಲಿಖಿತವೋ? ಯಾರು ಯಾರಿಗೆ ಹೇಳಿದರು? ಬಹಿರಂಗಪಡಿಸಲಿ,” ಎಂದು ಸವಾಲು ಹಾಕಿದರು.
ಮುಂದೆ ಮಾತನಾಡಿದ ಅವರು, “2028ರಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳುತ್ತಾರೆ. ಆದರೆ 2048 ಆದರೂ ಅವರು ಸಿಎಂ ಆಗಲ್ಲ. ಯಾಕೆಂದರೆ ನಾವು ಬಿಜೆಪಿಯವರು ಬಿಡಲ್ಲ. ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ,” ಎಂದು ಹೇಳಿದರು.


ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, “ಕಾಂಗ್ರೆಸ್‌ನಿಂದ ಡಿಕೆಶಿ ಸಿಎಂ ಆದರೂ, ಸಿದ್ದರಾಮಯ್ಯ ಇದ್ದರೂ ನಮಗೆ ಏನೂ ಸಂಬಂಧ ಇಲ್ಲ. ಕಾಂಗ್ರೆಸ್‌ನಿಂದ ಯಾರೇ ಸಿಎಂ ಆದರೂ ನಾವು ಕೇಳೋದಿಲ್ಲ,” ಎಂದು ಟೀಕಿಸಿದರು.
ಇದೇ ವೇಳೆ ಸಿದ್ದರಾಮಯ್ಯರ ಪುತ್ರ ಯತಿಂದ್ರಾ ಸಿದ್ದರಾಮಯ್ಯ ಕುರಿತು ಭವಿಷ್ಯವಾಣಿ ವಿಚಾರವೂ ಪ್ರಸ್ತಾಪಿಸಿ, “ಯತೀಂದ್ರ ಸಿಎಂ ಆಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಡಿಕೆಶಿ ಹಾಗೂ ಡಿ. ಕೆ. ಸುರೇಶ ನಮ್ಮ ಹೈಕಮಾಂಡ್ ಇಲ್ಲಿಯೇ ಇದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಮಾಂಡ್ ಬದಲಾಗಿದೆ ಎಂಬ ಅನುಮಾನ ಮೂಡುತ್ತಿದೆ,” ಎಂದು ಹೇಳಿದರು.
ಕಾಂಗ್ರೆಸ್ ಒಳಗೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗುತ್ತಿದ್ದು, ಸಿಎಂ ಸ್ಥಾನ ಕುರಿತ ಚರ್ಚೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕಾವು ಪಡೆದುಕೊಂಡಿದೆ.

