ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2023–24ರಲ್ಲಿ ರೂ.1479.59 ಕೋಟಿ, 2024–25ರಲ್ಲಿ ರೂ.529 ಕೋಟಿ ಹಾಗೂ 2025–26ರ ಜನವರಿ ತನಕ ರೂ.251.06 ಕೋಟಿ ಸೇರಿ ಒಟ್ಟು ರೂ.2259.56 ಕೋಟಿ ಅನುದಾನ ಮಂಜೂರುಗೊಂಡಿದೆ. ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ 400 ಬೆಡ್ ಆಸ್ಪತ್ರೆಯ ಕಾಮಗಾರಿಗೆ ಶೀಘ್ರದಲ್ಲೇ ರೂ.450 ಕೋಟಿಯ ಅಂದಾಜು ವೆಚ್ಚ ಮಂಜೂರಾಗಲಿದ್ದು, ಇದನ್ನು ಸೇರಿಸಿದರೆ ಕಳೆದ ಮೂರು ವರ್ಷಗಳಲ್ಲಿ ಪುತ್ತೂರು ಕ್ಷೇತ್ರಕ್ಕೆ ಒಟ್ಟು ರೂ.2709.65 ಕೋಟಿ ಅನುದಾನ ಲಭಿಸಿದಂತಾಗುತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಶಾಸಕರಿಗೆ ನೀಡಿದ ರೂ.50 ಕೋಟಿ ಅನುದಾನದಲ್ಲಿ 550 ರಸ್ತೆ ಕಾಮಗಾರಿ ಹಾಗೂ 79 ಶ್ರದ್ಧಾಕೇಂದ್ರಗಳ ಅಭಿವೃದ್ಧಿ ಸೇರಿ ಒಟ್ಟು 629 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಈ ಕಾಮಗಾರಿಗಳ ನಿರ್ವಹಣೆಗೆ ಐದು ಗುತ್ತಿಗೆದಾರರಿಗೆ ತಲಾ ರೂ.10 ಕೋಟಿಯಂತೆ ವಿಭಾಗಿಸಿ ನೀಡಲಾಗಿದ್ದು, ಈಗಾಗಲೇ ಶೇ.13ರಷ್ಟು ಅನುದಾನ ಬಿಡುಗಡೆಗೊಂಡಿದೆ. ಮುಂದಿನ 20 ದಿನಗಳಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ಉಪ್ಪಿನಂಗಡಿ–ಪುತ್ತೂರು ಚತುಷ್ಪಥ ರಸ್ತೆ ಪೂರ್ಣಗೊಳಿಸಲು ರೂ.12 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಕೃಷ್ಣನಗರದಿಂದ ಉಪ್ಪಿನಂಗಡಿ ತನಕದ ಚತುಷ್ಪಥ ರಸ್ತೆಯ ಡಿವೈಡರ್‌ನಲ್ಲಿ ವಿದ್ಯುತ್ ದೀಪ ಅಳವಡಿಕೆಗೆ ರೂ.5 ಕೋಟಿ ಅನುದಾನ ದೊರೆತಿದೆ. ಬೆಟ್ಟಂಪಾಡಿ–ಪಾಣಾಜೆ ರಸ್ತೆ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿಯಿಂದ ರೂ.3 ಕೋಟಿ ಸೇರಿ ಒಟ್ಟು ರೂ.6 ಕೋಟಿ ಮಂಜೂರುಗೊಂಡಿದೆ. ಕಬಕ–ವಿಟ್ಲ ಚತುಷ್ಪಥ ರಸ್ತೆಗೆ ರೂ.60 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿ, ಇದರಲ್ಲಿ ರೂ.10 ಕೋಟಿ ಅನುದಾನ ಲಭಿಸಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪುತ್ತೂರು ಕ್ಷೇತ್ರದ 38 ಕಿ.ಮೀ ರಸ್ತೆಗೆ ರೂ.38 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದೆ ಎಂದು ಹೇಳಿದರು.

ಹಾರಾಡಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ರೂ.8 ಕೋಟಿ ಅನುದಾನ ಮಂಜೂರಾಗಿದೆ. ರೈಲ್ವೇ ಇಲಾಖೆಯ ಮೇಲ್ವಿಚಾರಣೆಯಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದೂ ಶ್ರದ್ಧಾಕೇಂದ್ರಗಳಿಗೆ ಕಳೆದ ವರ್ಷ ರೂ.3 ಕೋಟಿ ಹಾಗೂ ಈ ವರ್ಷ ರೂ.8 ಕೋಟಿ, ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ರೂ.9 ಕೋಟಿ ಮತ್ತು ಜೈನ ಶ್ರದ್ಧಾಕೇಂದ್ರಗಳಿಗೆ ರೂ.2 ಕೋಟಿ ಅನುದಾನ ಮಂಜೂರುಗೊಂಡಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಉಪ್ಪಿನಂಗಡಿ ಬಸದಿ ಹಾಗೂ ಬಜತ್ತೂರು ಬಾರಿಕೆ ಬಸದಿಗೆ ತಲಾ ರೂ.1 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಹೇಳಿದರು.
ಪುತ್ತೂರು ಮಹಿಳಾ ಠಾಣೆಯನ್ನು ಎ-ಗ್ರೇಡ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಕೊಂಬೆಟ್ಟಿನಲ್ಲಿ 30 ಸೆಂಟ್ಸ್ ಜಾಗವನ್ನು ನೀಡಲಾಗುವುದು. ಪ್ರಸ್ತುತ ದೇವಳದ ಪುಷ್ಕರಿಣಿಯ ಭಾಗದಲ್ಲಿರುವ ಮಹಿಳಾ ಠಾಣೆ ಕೊಂಬೆಟ್ಟಿಗೆ ಸ್ಥಳಾಂತರಗೊಳ್ಳಲಿದೆ ಎಂದರು.
ಗುಪ್ತಚರ ಇಲಾಖೆಯ ಕಚೇರಿ ತೆರೆಯುವ ಪ್ರಸ್ತಾವನೆಯಂತೆ, ಪಡ್ನೂರಿನಲ್ಲಿ ಸಹಾಯಕ ಗುಪ್ತಚರ ಇಲಾಖೆಯ ಕಚೇರಿ ಹಾಗೂ ವಸತಿ ಸಂಕೀರ್ಣಕ್ಕಾಗಿ 44 ಸೆಂಟ್ಸ್ ಜಾಗ ಮಂಜೂರು ಮಾಡಲಾಗಿದೆ. ಕುರಿಯ ಗ್ರಾಮದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಾಣಕ್ಕಾಗಿ 7 ಎಕರೆ ಜಾಗವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಪುತ್ತೂರಿನ ಬನ್ನೂರು ಆನೆಮಜಲು ಪ್ರದೇಶದಲ್ಲಿ ನಿರ್ಮಿಸಲಾದ ನೂತನ ನ್ಯಾಯಾಲಯ ಸಂಕೀರ್ಣವನ್ನು ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸಚಿವರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಭಾಗವಹಿಸಲಿದ್ದಾರೆ ಎಂದು ಶಾಸಕ ಅಶೋಕ್ ರೈ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *