ಪುತ್ತೂರು: ವ್ಯಕ್ತಿಗೂ ಸಮಾಜಕ್ಕೂ ಜೀವ ಕೊಡುವ ಶಕ್ತಿ ಮಹಿಳೆಯರಲ್ಲಿ ಇದೆ. ಬಡವರು ಹಾಗೂ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾದಾಗ ಮಾತ್ರ ದೇಶ ಮತ್ತು ರಾಜ್ಯ ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ಸಾಧ್ಯ. ಈ ಕಾರಣಕ್ಕಾಗಿ ಮಹಿಳಾ ಕೇಂದ್ರಿತ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಗಳ ಸಹಯೋಗದಲ್ಲಿ ರವಿವಾರ ಪುತ್ತೂರು ಪುರಭವನದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಭಾಷಣ ಮಾಡಬಹುದು. ಆದರೆ ಸರ್ಕಾರದ ಯೋಜನೆಗಳನ್ನು ಸಮಾಜದ ತಳಮಟ್ಟಕ್ಕೆ ತಲುಪಿಸುವಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ವಿದ್ಯಾಭ್ಯಾಸ ಮತ್ತು ಮಾಹಿತಿ ಕೊರತೆಯಿಂದ ಹಲವರು ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಮನೆ, ನಿವೇಶನ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಮಾಹಿತಿ ನೀಡಿ ಶಾಸಕರ ಕಚೇರಿಯನ್ನು ಸಂಪರ್ಕಿಸುವಂತೆ ಮಾಡಬೇಕು. ಪಕ್ಷ ಭೇದವಿಲ್ಲದೆ ಅವರಿಗೆ ನೆರವಾಗಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ನನಗೆ ಶಾಸಕ ಸ್ಥಾನ ಕಟ್ಟಿಟ್ಟ ಬುತ್ತಿಯಲ್ಲ. ಜನರು ಆಶೀರ್ವಾದಿಸಿದರೆ ಮತ್ತೆ ಅವಕಾಶ ಸಿಗಬಹುದು. ಅಧಿಕಾರದಲ್ಲಿರದ ಸಮಯದಲ್ಲಿ ವ್ಯಾಪಾರದ ಮೂಲಕ ವರ್ಷಕ್ಕೆ 7-8 ಕೋಟಿ ರೂ. ಆದಾಯ ಮಾಡುತ್ತಿದ್ದೆ. ಈಗ ಶುಗರ್ ಹಾಗೂ ಬಿಪಿ ಸಮಸ್ಯೆ ಇದ್ದರೂ ಜನಸೇವೆ ಮಾಡುವ ಸಂತೋಷ ಇದೆ ಎಂದು ಅಶೋಕ್ ರೈ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಗೃಹಲಕ್ಷ್ಮಿ ಯೋಜನೆ ಪುತ್ತೂರು ಕ್ಷೇತ್ರದ ಸುಮಾರು 72 ಸಾವಿರ ಮನೆಗಳಿಗೆ ತಲುಪಿದೆ. ಅನ್ನಭಾಗ್ಯ ಯೋಜನೆಯಡಿ 38,397 ಮಂದಿ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು ಸುಮಾರು 4.50 ಕೋಟಿ ಬಾರಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸಮಾಜದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸುವ ಮಹಿಳೆಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ 50 ಶೇಕಡಾ ಮೀಸಲಾತಿ ನೀಡಲಾಗಿದೆ. ಆದರೆ ವಿಧಾನಸಭೆಯಲ್ಲಿ 1956ರಲ್ಲಿ 13 ಮಂದಿ ಮಹಿಳಾ ಪ್ರತಿನಿಧಿಗಳಿದ್ದರೆ ಈಗ ಕೇವಲ 10 ಮಂದಿ ಮಾತ್ರ ಇದ್ದಾರೆ. ಮಹಿಳೆಯರು ಎಲ್ಲ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ರಾಜೇಶ್ವರಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಿಲ್ಲಾಧ್ಯಕ್ಷೆ ಶಕುಂತಳಾ, ತಾಲೂಕು ಅಧ್ಯಕ್ಷೆ ಕಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *