ಉಳ್ಳಾಲ: ಆತ್ಮಹತ್ಯೆ ಪಾಯಿಂಟ್‌ ಆಗಿ ಗುರುತಿಸಿಕೊಂಡಿರುವ ನೇತ್ರಾವತಿ ಸೇತುವೆಯಿಂದ ವ್ಯಕ್ತಿಯೋರ್ವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ಸಂಭವಿಸಿದೆ. ನದಿಯಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮೀನುಗಾರರ ತಕ್ಷಣದ ಸಾಹಸದಿಂದ ವ್ಯಕ್ತಿಯ ಜೀವ ಉಳಿದಿದೆ.
ಪಂಪ್ವೆಲ್ ನಾಗುರಿ ನಿವಾಸಿಯಾದ ವಯಸ್ಕ ವ್ಯಕ್ತಿ ರವಿವಾರ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾರೆ. ಕೆಳಭಾಗದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರು ಘಟನೆ ಗಮನಿಸಿ ತಕ್ಷಣವೇ ನದಿಗೆ ಹಾರಿ ವ್ಯಕ್ತಿಯನ್ನು ದೋಣಿಗೆ ಎಳೆದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ವಾಹನ ಅಪಘಾತದಲ್ಲಿ ಸೇತುವೆಗೆ ಅಳವಡಿಸಿದ್ದ ತಡೆಬೇಲಿ ಮುರಿದು ಹೋಗಿದ್ದ ಘಟನೆ ನಡೆದಿತ್ತು. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ತಡೆಬೇಲಿಯನ್ನು ದುರಸ್ತಿ ಮಾಡದಿರುವುದು ಆತಂಕಕ್ಕೆ ಕಾರಣವಾಗಿದ್ದು, ಅದೇ ಸ್ಥಳದಿಂದ ವ್ಯಕ್ತಿ ಹಾರಿರುವ ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.
ಮೀನುಗಾರರಾದ ರಾಧಾ ಜಮಾಲ್, ಈ ದಿನ ಹಬ್ಬ ಹಾಗೂ ಮಯ್ಯದಿ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಘಟನೆ ವೇಳೆ ಹನೀಫ್ ಸೇರಿದಂತೆ ಉಳ್ಳಾಲ ಠಾಣೆಯ ಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯರು ಸೇತುವೆಯ ತಡೆಬೇಲಿ ತುರ್ತು ದುರಸ್ತಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *