ಕಡಬ: ಸಾರ್ವಜನಿಕರ ದೂರು ಹಾಗೂ ರೈಲು ಬಳಕೆದಾರರ ಸಂಘದ ಮನವಿಯ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳವಾರ ಕಡಬ ತಾಲೂಕಿನ ನೆಟ್ಟನ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಲ್ದಾಣದ ಪರಿಸರ ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಶಾಸಕಿ ಪರಿಶೀಲಿಸಿದರು. ನಿರ್ವಹಣೆಯಲ್ಲಿ ಕಂಡುಬಂದ ಲೋಪಗಳ ಬಗ್ಗೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿದಿನ ನಿಲ್ದಾಣದ ಪರಿಸರ ಸ್ವಚ್ಛವಾಗಿರಬೇಕು ಹಾಗೂ ಯಾವುದೇ ನಿರ್ಲಕ್ಷ್ಯ ನಡೆಯಬಾರದು ಎಂದು ಖಡಕ್ ಸೂಚನೆ ನೀಡಿದರು.

ಪರಿಶೀಲನೆ ವೇಳೆ ಮಹಿಳೆಯರಿಗಾಗಿ ಮೀಸಲಿಟ್ಟಿರುವ ವಿಶ್ರಾಂತಿ ಗೃಹದಲ್ಲಿ ಪುರುಷರು ವಾಸ್ತವ್ಯ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶಾಸಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳು ಇದ್ದರೂ ಈ ರೀತಿಯ ಘಟನೆ ಹೇಗೆ ನಡೆದಿದೆ ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ನಿಲ್ದಾಣದ ವಿವಿಧ ಸಮಸ್ಯೆಗಳ ಕುರಿತು ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ ನೆಟ್ಟನ ಅವರಿಂದ ಮಾಹಿತಿ ಪಡೆದ ಶಾಸಕಿ, ಕಡಬ ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ತಿಂಗಳಿಗೊಮ್ಮೆ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜುರೆ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *