ಕಡಬ, ಡಿಸೆಂಬರ್ 30:
ಕಡಬ–ಪಂಜ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಲ ಸಮೀಪದ ಓಂತ್ರಡ್ಕವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ತೆರೆಯಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಂಗಳವಾರ ಸಂಜೆ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಗುದ್ದಲಿ ಪೂಜೆ ನೆರವೇರಿಸಿದ ಬಳಿಕವೇ ಕಾಮಗಾರಿ ಆರಂಭವಾಗಿದ್ದು ಈಗಾಗಲೇ ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರಂಭದಲ್ಲಿ ಒಂದು ಕೋಟಿ ರೂ. ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲಾಗಿದ್ದು, ನಂತರ ರಸ್ತೆ ಅಭಿವೃದ್ಧಿಗೆ ಮತ್ತೊಂದು ಕೋಟಿ ರೂ. ಮಂಜೂರಾಗಿದೆ. ಮೊದಲ ಹಂತದ ಒಂದು ಕೋಟಿ ರೂ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಇನ್ನೂ ಬಾಕಿಯಿದೆ. ಈ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ, ಉಳಿದ ಒಂದು ಕೋಟಿ ರೂ. ಕಾಮಗಾರಿಯನ್ನು ಒಂದು ತಿಂಗಳೊಳಗೆ ಮುಗಿಸಿ ಲೋಕಾರ್ಪಣೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.




ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸುಳ್ಯ ವಿಭಾಗದ ಎಇಇ ಗೋಪಾಲ್ ಶಾಸಕರಿಗೆ ಕಾಮಗಾರಿಯ ಪ್ರಗತಿ ಕುರಿತು ಪೂರಕ ಮಾಹಿತಿ ನೀಡಿದರು. ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಗೌಡ ಹಾಗೂ ಅಕ್ಷತ ಬಾಲಕೃಷ್ಣ, ಕಡಬ ಸಿಎ ಬ್ಯಾಂಕ್ ನಿರ್ದೇಶಕರಾದ ಸದಾನಂದ ಪಿ. ಮತ್ತು ಪುರುಷೋತ್ತಮ ಅವರು, ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಶಾಸಕರ ಗಮನಕ್ಕೆ ತಂದರು.



ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಕಡಬ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಡಂ ಕುಂಡೋಳಿ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್, ಗುತ್ತಿಗೆದಾರ ಮನ್ವಿಜ್ ಶೆಟ್ಟಿ (ಪುತ್ತೂರು) ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


