ದಾವಣಗೆರೆ ಹೊರವಲಯದ ಮಿಟ್ಲಕಟ್ಟೆ ಬಳಿ ನಡೆದ ದಾರುಣ ರಸ್ತೆ ಅಪಘಾತದಲ್ಲಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತಳನ್ನು ಪ್ರಿಯಾ (21) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಯುವಕ ಯೋಗೇಶ್ ದಾವಣಗೆರೆ ಮೂಲದವನು. ಇಬ್ಬರೂ ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.




ಜಗಳವಾಡುತ್ತಾ ಬೈಕ್ ಸವಾರಿ – ಸಿಸಿಟಿವಿಯಲ್ಲಿ ಸೆರೆ
ಪ್ರಿಯಾ ಹಾಗೂ ಯೋಗೇಶ್ ನಡುವೆ ಊಟದ ಸ್ಥಳದಲ್ಲೇ ಗಲಾಟೆ ನಡೆದಿತ್ತು. ಇಬ್ಬರ ಜಗಳ ಸಿಸಿಟಿವಿ ಕ್ಯಾಮೆರಾದಲ್ಲೂ ದಾಖಲಾಗಿದೆ. ನಂತರ ಪ್ರಿಯಾ ಹಾಗೂ ಆಕೆಯ ಸ್ನೇಹಿತೆ ಬೇರೆ ಬೈಕಿನಲ್ಲಿ ತೆರಳುತ್ತಿದ್ದರೆ, ಯೋಗೇಶ್ ಬುಲೆಟ್ ಬೈಕ್ ಮೇಲೆ ಅವರನ್ನು ಹಿಂಬಾಲಿಸಿದ್ದಾನೆ.
ನಡು ರಸ್ತೆಯಲ್ಲಿ ಪ್ರಿಯಾಳ ಬೈಕು ನಿಲ್ಲಿಸಿ, ಅವಳನ್ನು ಬಲವಂತವಾಗಿ ತನ್ನ ಬೈಕ್‌ಗೆ ಕೂರಿಸಿಕೊಂಡು ಹೊರಟಿದ್ದಾನೆ. ಈ ವೇಳೆ ಜಗಳದ ನಡುವೆ ಅಜಾಗರೂಕತೆಯಿಂದ ಬೈಕ್ ಚಲಾಯಿಸಲಾಗಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ ಆಸ್ಪತ್ರೆಗೆ ದಾಖಲಾತಿ – ದೂರು ದಾಖಲು
ಗಂಭೀರವಾಗಿ ಗಾಯಗೊಂಡಿರುವ ಯೋಗೇಶನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಪ್ರಿಯಾಳ ಕುಟುಂಬಸ್ಥರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



