ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಅವರು 2026ನೇ ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

2024ರ ಪಟ್ಟಿಗೆ ಹೋಲಿಸಿದರೆ ಈ ಬಾರಿ ಪದಾಧಿಕಾರಿಗಳ ಸಂಖ್ಯೆಯನ್ನು 20ರಿಂದ 23ಕ್ಕೆ ಏರಿಸಲಾಗಿದ್ದು, ಸಂಘಟನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಹೆಚ್ಚಿದ ಉಪಾಧ್ಯಕ್ಷರ ಸಂಖ್ಯೆ:

ಹಿಂದಿನ ಪಟ್ಟಿಯಲ್ಲಿ ಏಳು ಮಂದಿ ಉಪಾಧ್ಯಕ್ಷರಿದ್ದರು, ಬಳಿಕ ಲೋಕಸಭಾ ಚುನಾವಣೆಯ ಬಳಿಕ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಪ್ರಸನ್ನ ಕುಮಾ‌ರ್ ಮಾರ್ತ ಅವರನ್ನು 8 ನೇ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಬಾರಿ ಆ ಸಂಖ್ಯೆಯನ್ನು ಒಂಬತ್ತಕ್ಕೆ ಹೆಚ್ಚಿಸಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್‌ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಇವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.

ಕವಿತಾ ಸನಿಲ್ ಅವರು ಮಂಗಳೂರಿನ ಪ್ರಭಾವಿ ಬಿಲ್ಲವ ನಾಯಕಿಯಾಗಿದ್ದು, ಕಾಂಗ್ರೆಸ್ ನಲ್ಲಿದ್ದಾಗ, ಸಿ ಎಂ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. 2024ರ ಏಪ್ರಿಲ್ ತಿಂಗಳಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಮ್ಮುಖ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದಾಗಿ 21 ತಿಂಗಳ ಬಳಿಕ ಅವರಿಗೆ ಪಕ್ಷ ಹುದ್ದೆ ನೀಡಿದೆ.

ಇದರೊಂದಿಗೆ ಜಯಂತ್ ಕೋಟ್ಯಾನ್ ಸುನೀಲ್‌ ಆಳ್ವ, ಜಿ. ಪೂಜಾ ಪ್ರಶಾಂತ್ ಪೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿಪ್ರಸಾದ್ ಹೆಗ್ಡೆ, ರಾಕೇಶ್ ರೈ ಕೆಡಂಜಿ ಹಾಗೂ ತಿಲಕ್ರಾಜ್ ಕೃಷ್ಣಾಪುರ ಅವರು ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ವಿಭಾಗದಲ್ಲಿ ಸ್ಥಿರತೆ:

ಪಕ್ಷದ ಪ್ರಮುಖ ಜವಾಬ್ದಾರಿಯಾದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರೇಮಾನಂದ ಶೆಟ್ಟಿ, ಯತೀಶ್‌ ಅರ್ವಾ‌ರ್ ಮತ್ತು ಎಂಎಲ್ಸಿ ಕಿಶೋರ್ ಕುಮಾ‌ರ್ ಪಿ.

ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಸಂಘಟನಾತ್ಮಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ.

ಕಿಶೋ‌ರ್ ಕುಮಾ‌ರ್ ಅವರು ವಿಧಾನ ಪರಿಷತ್‌ ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಬಹುದೆಂಬ ಲೆಕ್ಕಚಾರ ರಾಜಕೀಯ ವಲಯದಲ್ಲಿ ನಡೆಯುತಿತ್ತು.

Leave a Reply

Your email address will not be published. Required fields are marked *