ಪುತ್ತೂರು: ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನಿಗದಿಯಾದ ಸೇಡಿಯಾಪು ಜಾಗದಲ್ಲೇ 300 ಹಾಸಿಗೆಗಳ ನೂತನ ಸರಕಾರಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಬಿಜೆಪಿ ಮುಖಂಡರು ಅನಗತ್ಯವಾಗಿ ಈ ವಿಚಾರದಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.





ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಿಯಾಪುವಿನಲ್ಲಿ 300 ಹಾಸಿಗೆಗಳ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಒಂದೇ ಸ್ಥಳದಲ್ಲಿ ನಿರ್ಮಾಣವಾಗಲಿದೆ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಒಂದೇ ಜಾಗದಲ್ಲಿದ್ದರೆ ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮತ್ತು ಸರಕಾರಿ ಆಸ್ಪತ್ರೆ ಬೇರೆ ಬೇರೆ ಪ್ರದೇಶಗಳಲ್ಲಿ ಇರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.
ಸೇಡಿಯಾಪು ಪ್ರದೇಶಕ್ಕೆ ಹೋಗಲು ಯಾವುದೇ ತೊಂದರೆಯಿಲ್ಲ. ಪುತ್ತೂರು–ಉಪ್ಪಿನಂಗಡಿ ಚತುಷ್ಪಥ ರಸ್ತೆ ಇದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ. ಈ ಯೋಜನೆಗೆ ಬಿಜೆಪಿಯ ಕೇವಲ ನಾಲ್ಕೈದು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸಿ ಈ ವಿರೋಧದ ಹೇಳಿಕೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.


ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಅಸಾಧ್ಯವೆಂದು ಹೇಳಿದ್ದನ್ನು ಶಾಸಕ ಅಶೋಕ್ ಕುಮಾರ್ ರೈ ಸಾಧ್ಯವಾಗಿಸಿದ್ದಾರೆ. ಈಗ ಏನೂ ಹೇಳಲು ಇಲ್ಲದವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ಈಗಿರುವ ಸರಕಾರಿ ಆಸ್ಪತ್ರೆಯ ಜಾಗದಲ್ಲೇ 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಬೇಕು ಎಂದು ಹೇಳುವ ಕೆಲ ಬಿಜೆಪಿ ಮುಖಂಡರು, ಹಿಂದೆ ಬಿಜೆಪಿ ಶಾಸಕರ ಅವಧಿಯಲ್ಲೇ ಅಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿರುವುದನ್ನು ಮರೆತಿರುವರೇ ಎಂದು ಪ್ರಶ್ನಿಸಿದರು.
ಮೆಡಿಕಲ್ ಕಾಲೇಜು ಕುರಿತು ಮಾತನಾಡುವ ಬಿಜೆಪಿಗರು, ಹಿಂದೆ ಬಿಜೆಪಿ ಶಾಸಕರೇ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಮೀನು ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದ ವಿಚಾರವನ್ನು ಮರೆತಿರುವರೇ ಎಂದು ಅವರು ಪ್ರಶ್ನಿಸಿದರು.
ಸೇಡಿಯಾಪುವಿನ 40 ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು, 300 ಹಾಸಿಗೆಗಳ ಆಸ್ಪತ್ರೆ ಹಾಗೂ ಆಯುರ್ವೇದ ಆಸ್ಪತ್ರೆ ನಿರ್ಮಾಣವಾಗಲಿದ್ದು, ಈ ಕುರಿತು ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಮೋನು ಬಪ್ಪಳಿಗೆ, ಲ್ಯಾನ್ಸಿ ಮಸ್ಕರೇನಸ್, ಸುಪ್ರೀತ್ ಕಣ್ಣರಾಯ ಮತ್ತು ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

