ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಉಬರಡ್ಕ ಗ್ರಾಮದಲ್ಲಿ ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸೊಸೈಟಿ ಚುನಾವಣೆಯಲ್ಲಿ ಜಾತಿ ರಾಜಕೀಯ ನಡೆದಿದೆ ಎಂದು ಆರೋಪಿಸಿ ಸುಮಾರು 45ಕ್ಕೂ ಹೆಚ್ಚು ಬಿಜೆಪಿ ಸಕ್ರಿಯ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿರುವ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಜಾತಿ ರಾಜಕೀಯ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಕಾರ್ಯಕರ್ತರು ಮಾಡಿದ್ದಾರೆ. ಈ ಹಿನ್ನೆಲೆ ಗ್ರಾಮದಲ್ಲಿನ ಹಲವು ಸಕ್ರಿಯ ಕಾರ್ಯಕರ್ತರು ಸಭೆ ಸೇರಿ ಚರ್ಚಿಸಿದ ಬಳಿಕ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಉಬರಡ್ಕ ಮಿತ್ತೂರು ಸಹಕಾರಿ ಸಂಘದ ನಿರ್ದೇಶಕರಾಗಿದ್ದ ರಾಜೇಶ್ ಭಟ್ ನೆಕ್ಕಿಲ ಮತ್ತು ಪ್ರಭಾಕರ ಅಮೈ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಸಂಘದ ಉನ್ನತ ಹುದ್ದೆಗಳ ಆಯ್ಕೆಯಲ್ಲಿ ಪಕ್ಷದ ಕೆಲವು ನಾಯಕರ ನಿಲುವು ಹಾಗೂ ಕಾಣದ ಕೈಗಳ ಹಸ್ತಕ್ಷೇಪ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಮನನೊಂದ ಸುಮಾರು 45ಕ್ಕೂ ಹೆಚ್ಚು ಕಾರ್ಯಕರ್ತರು ಸಭೆ ಸೇರಿ ಚರ್ಚಿಸಿದ ಬಳಿಕ ತಮ್ಮ ಸಾಮೂಹಿಕ ರಾಜೀನಾಮೆ ಪತ್ರವನ್ನು ಉಬರಡ್ಕ ಮಿತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ಮದುವೆಗದ್ದೆ ಅವರಿಗೆ ಹಸ್ತಾಂತರಿಸಿದ್ದಾರೆ.
ಸುಳ್ಯ ಕ್ಷೇತ್ರವು ಶಾಸಕಿಯಾಗಿರುವ ಭಾಗೀರಥಿ ಮುರುಳ್ಯ ಅವರ ತವರು ನೆಲವಾಗಿದ್ದು, ಬಿಜೆಪಿಯ ಭದ್ರಕೋಟ ಎಂದೇ ಗುರುತಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಈ ಮಟ್ಟದ ಭಿನ್ನಮತ ಮತ್ತು ಬಂಡಾಯ ಎದ್ದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *