ಮುಂಬೈ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಇಂದು (ನ.24) ಮುಂಬೈ ನ ನಿವಾಸದಲ್ಲಿ ನಿಧನ ಹೊಂದಿದ್ದಾರೆ, ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಕೆಲ ದಿನಗಳ ಹಿಂದೆ ಮುಂಬೈ ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಮನೆಗೆ ಕರೆತರಲಾಗಿತ್ತು ಆದರೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.




ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ಧರ್ಮೇಂದ್ರ 1960 ರ ಚಲನಚಿತ್ರ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರಿಗೆ 2012 ರಲ್ಲಿ ಭಾರತ ಸರ್ಕಾರದಿಂದ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು ‘ಯಾದೋನ್ ಕಿ ಬಾರತ್’, ‘ಮೇರಾ ಗಾಂವ್ ಮೇರಾ ದೇಶ್’, ‘ಫೂಲ್ ಔರ್ ಪತ್ತರ್’, ‘ಬೇಗಹಬಾಯ್’ ಮತ್ತು ಇತರ ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಧರ್ಮೇಂದ್ರ ಕೇವಲ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಹೆಸರು ಮಾಡಿದ್ದರು. ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.



