ಕಡಬ : ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಪ್ರದೇಶದಲ್ಲಿ ಬಾವಿ ತೋಡುವ ಸಂದರ್ಭದಲ್ಲಿ ಕಲ್ಲು ಸೀಳಲು ಬಳಸಿದ ಸ್ಫೋಟಕಗಳು ಆಕಸ್ಮಿಕವಾಗಿ ಸಿಡಿದು ಸುತ್ತಮುತ್ತಲಿನ ಮನೆಗಳಿಗೆ ಹಾನಿ ಉಂಟಾದ ಘಟನೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ರೋಹಿಣಿ ಸಿ.ಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೈಸೂರು ನಿವಾಸಿ ಸೋಮಶೇಖರ ಅವರು ಬಾವಿ ತೋಡುವ ಕೆಲಸ ಮಾಡಿಸುತ್ತಿದ್ದ ವೇಳೆ, ಕಲ್ಲು ಸೀಳುವ ಉದ್ದೇಶದಿಂದ ಕೋಡಿಂಬಲ ನಿವಾಸಿ ಶಿವರಾಮ ಎಂಬವರು ಬಾವಿಯೊಳಗೆ ಸ್ಫೋಟಕಗಳನ್ನು ಸಿಡಿಸಿದ್ದರು. ಈ ವೇಳೆ ಸ್ಫೋಟದ ತೀವ್ರತೆಯಿಂದ ಸಮೀಪದ ನಿವಾಸಿಗಳಾದ ವಾಮನ ಮೂಲ್ಯ ಹಾಗೂ ಕೆ.ಟಿ. ಮೋಹನ ಅವರ ಮನೆಗಳಿಗೆ ಹಾನಿಯಾಗಿದೆ.
ಘಟನೆಯ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾವಿಯೊಳಗೆ ಇನ್ನೂ ಆರು ಜೀವಂತ ಸ್ಫೋಟಕಗಳು ಇರುವುದನ್ನು ಪತ್ತೆಹಚ್ಚಲಾಗಿದೆ.

ಈ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತ್ತು. ಆದರೆ ಕಂಪ್ರೆಸ್ಸರ್ ಬಳಸಿ ಸ್ಫೋಟಕಗಳನ್ನು ತೆರವುಗೊಳಿಸುವುದು ಅಪಾಯಕಾರಿ ಎಂದು ಕಂಡುಬಂದ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇಂದು ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ರೋಹಿಣಿ ಸಿ.ಕೆ ಅವರು ಪರಿಶೀಲನೆ ನಡೆಸಿ, ಬಾವಿಯೊಳಗಿನ ಜೀವಂತ ಸ್ಫೋಟಕಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕೋರ್ಟ್ ಅನುಮತಿ ದೊರೆತ ಬಳಿಕ ತಜ್ಞರ ಸಮ್ಮುಖದಲ್ಲಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಕಡಬ ಠಾಣೆಯ ಎಸ್ಐ ಜಂಬೂರಾಜ್ ಮಹಾಜನ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *