ಮೈಸೂರು: ಮೈಸೂರು ಬಳಿಯ ಮಳವಳ್ಳಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಸುಳ್ಯ ತಾಲೂಕಿನ ಉಭರಡ್ಕ ನಿತ್ತೂರು ಗ್ರಾಮದ ಕಲ್ತಾನ ನಿವಾಸಿ ಶೇಷಪ್ಪ ನಾಯಕ್ ಅವರ ಪುತ್ರ ದೀಕ್ಷಿತ್ (25) ಎಂದು ಗುರುತಿಸಲಾಗಿದೆ. ದೀಕ್ಷಿತ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಊರಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಮೈಸೂರಿಗೆ ಸಮೀಪದ ಮಳವಳ್ಳಿ ಬಳಿ ದೀಕ್ಷಿತ್ ಬೈಕ್ ಸವಾರಿ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಅಪಘಾತದಲ್ಲಿ ದೀಕ್ಷಿತ್ ಅವರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.




ಮೃತ ದೀಕ್ಷಿತ್ ಅವರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನದ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



