ಭದ್ರಾವತಿ ತಾಲೂಕಿನ ನಾವುಲೇ ಸಮೀಪ ಘಟನೆ; ಹಲವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಹಳ್ಳ ಗ್ರಾಮದ ಬಳಿ ಇಂದು ಬೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಒಂದು ಬ್ರಿಡ್ಜ್‌ನಿಂದ ಉರುಳಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಇದ್ದ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಬರುತ್ತಿದ್ದ “ಶ್ರೀ ರೇಣುಕಾಂಬ” ಹೆಸರಿನ ಖಾಸಗಿ ಬಸ್ ಕಾಗೆಹಳ್ಳ ಗ್ರಾಮದ ಸಮೀಪ ಅಪಘಾತಕ್ಕೀಡಾಗಿದೆ. ಬಸ್ ಚಲಿಸುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿ ಬ್ರಿಡ್ಜ್‌ನಿಂದ ಕೆಳಕ್ಕೆ ಬಿದ್ದಿದೆ.







ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಬಸ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸ್ಥಳೀಯರು ಶ್ರಮಿಸಿದರು. ಅಪಘಾತದ ಪರಿಣಾಮವಾಗಿ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

