ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸುಳ್ಯ ನಗರ ಘಟಕವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಾರಿಗೆ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಬಸ್ ಸೇವೆಯನ್ನು ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಸುಳ್ಯ ಡಿಪೋ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.



ಈ ಬಸ್ ಸೇವೆ ಎಬಿವಿಪಿ ನಡೆಸಿದ ನಿರಂತರ ಪ್ರತಿಭಟನೆ, ಹೋರಾಟ ಹಾಗೂ ಶಾಸಕರಿಗೆ ಸಲ್ಲಿಸಿದ ಮುಂದುವರಿದ ಮನವಿಗಳ ನೇರ ಫಲಿತಾಂಶವಾಗಿದ್ದು, ನೈಜ ಹೋರಾಟಕ್ಕೆ ಫಲ ಸಿಗುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಎಬಿವಿಪಿ ತಿಳಿಸಿದೆ.
ಕಾಂಗ್ರೆಸ್ ನಾಯಕರು 2025ರ ಜೂನ್ 27ರಂದು ಮನವಿ ಸಲ್ಲಿಸಿದ್ದೇವೆ ಎಂದು ಹೇಳಿಕೊಂಡಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆ ಮನವಿಯ ನಂತರವೂ ಆರು ತಿಂಗಳಿಗಿಂತ ಹೆಚ್ಚು ಕಾಲ ಬಸ್ ಸೇವೆ ಒದಗಿಸದೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಎಬಿವಿಪಿ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸಿ, ಮುಂದುವರಿದ ಮನವಿಗಳನ್ನು ಸಲ್ಲಿಸಿದ ಪರಿಣಾಮ ಕೇವಲ ಒಂದೇ ತಿಂಗಳೊಳಗೆ ಬಸ್ ಸೇವೆ ಲಭ್ಯವಾಗಿದೆ ಎಂದು ಎಬಿವಿಪಿ ಹೇಳಿದೆ.


ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ ಸೇವೆಗೆ ಕಾರಣವಾದ ನೈಜ ಹೋರಾಟವನ್ನು ಚೆನ್ನಾಗಿ ಅರಿತಿದ್ದಾರೆ. ಸಮಸ್ಯೆ ಇದ್ದಾಗ ಮೌನ ವಹಿಸಿ, ಪರಿಹಾರ ಬಂದ ಬಳಿಕ ಮಾತ್ರ ಶ್ರೇಯಸ್ಸು ಪಡೆಯಲು ಮುಂದಾಗುವ ಕೆಲವರ ನಡೆ ಖಂಡನೀಯವಾಗಿದೆ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರಚಾರ ಹಾಗೂ ಹೇಳಿಕೆಗಳ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ವಿದ್ಯಾರ್ಥಿ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ತಿಳಿಸಿದೆ.
ಇನ್ನು ಮುಂದೆ ಈ ವಿಷಯದ ಕುರಿತು ರಾಜಕೀಯ ಉದ್ದೇಶದಿಂದ ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲವೆಂದು ಎಬಿವಿಪಿ ಸ್ಪಷ್ಟಪಡಿಸಿದ್ದು, ವಿದ್ಯಾರ್ಥಿಗಳ ಅಧ್ಯಯನ, ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳು ಹಾಗೂ ನೈಜ ವಿದ್ಯಾರ್ಥಿ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ತಿಳಿಸಿದೆ.
ಈ ಬಸ್ ಸೇವೆ ಯಾರ ಹೋರಾಟದಿಂದ ಲಭ್ಯವಾಗಿದೆ ಎಂಬುದು ಈಗಾಗಲೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಿಳಿದಿದೆ ಎಂದು ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




