ಪುತ್ತೂರು: ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಮುಧ್ವೇಷ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಆರೋಪದಡಿ ಡಾ. ಕಲ್ಲಡ ಪ್ರಭಾಕರ ಭಟ್ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪಿರ್ಯಾದಿದಾರರಾದ ಪುತ್ತೂರು ನಿವಾಸಿ ರಾಮಚಂದ್ರ ಕೆ. ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 12.01.2026 ರಂದು ನಡೆದ ಕಾರ್ಯಕ್ರಮದಲ್ಲಿ ಡಾ. ಕಲ್ಲಡ ಪ್ರಭಾಕರ ಭಟ್ ಅವರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ, ಕೋಮುಧ್ವೇಷಕಾರಿ ಹಾಗೂ ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿರುವುದಾಗಿ ಆರೋಪಿಸಲಾಗಿದೆ.

ಇದಲ್ಲದೆ, ಸದ್ರಿ ಭಾಷಣವನ್ನು “VIKASANA TV” (ವಿಕಸನ ಟಿವಿ) ಎಂಬ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಡಾ. ಕಲ್ಲಡ ಪ್ರಭಾಕರ ಭಟ್, ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿಯಲ್ಲಿ ಮನವಿ ಮಾಡಲಾಗಿದೆ.

ಪಿರ್ಯಾದಿಯ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 10/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂಗಳು 196, 299, 302, 353(2), 3(5) ರಂತೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *