ಶಿರಸಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಜನರಿಗೆ ಚೆಸ್ ಕಲಿಕೆ ಬಗ್ಗೆ ಉತ್ತೇಜಿಸಲು ತಾಲ್ಲೂಕಿನ ಇಸಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ₹ 8 ಲಕ್ಷ ವೆಚ್ಚದಲ್ಲಿ ‘ಚೆಸ್ ಪಾರ್ಕ್’ ಆರಂಭಿಸಲಾಗಿದೆ.

ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಸಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಸೌಲಭ್ಯ ಕಲ್ಪಿಸಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನ ₹8 ಲಕ್ಷ ವೆಚ್ಚದಲ್ಲಿ ಚೆಸ್ ಪಾರ್ಕ್ ನಿರ್ಮಿಸಲಾಗಿದೆ.

ಇಲ್ಲಿ ವಿದ್ಯಾರ್ಥಿಗಳು ಅಲ್ಲದೇ, ಗ್ರಾಮಸ್ಥರು ಚೆಸ್ ಆಡಬಹುದು.

‘ಪಾರ್ಕ್ ಆವರಣದಲ್ಲಿ ಅಲ್ಲದೇ ತೆರೆದ ಉದ್ಯಾನದ ಕೆಲವೆಡೆ ಚೆಸ್ ಆಡಲು 10 ಆಸನ ವ್ಯವಸ್ಥೆ, ಚೆಸ್ ಬೋರ್ಡ್, ಕಾಯಿಗಳ ವ್ಯವಸ್ಥೆ ಮಾಡಲಾಗಿದೆ. ಉದ್ಯಾನದ ಒಂದು ಬದಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಈಶ್ವರ ಕಾಂದೂ ಅವರ ಚೆಸ್ ಪಾರ್ಕ್‌ ಕುರಿತ ಕನಸನ್ನು ಇಲ್ಲಿ ನನಸು ಮಾಡುವ ಪ್ರಯತ್ನ ಮಾಡಲಾಗಿದೆ’ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕಿರಣಕುಮಾರ ತಿಳಿಸಿದರು.

‘ಪಾರ್ಕ್‍ನಲ್ಲಿ ವಿಶ್ವಶ್ರೇಷ್ಠ ಚೆಸ್ ಆಟಗಾರರಾದ ವಿಶ್ವನಾಥನ್ ಆನಂದ, ಗುಕೇಶ ಕುಮಾರ, ಪ್ರಗ್ನಾನಂದ ಹಾಗೂ ಇನ್ನಿತರ ಪ್ರಸಿದ್ಧ ಆಟಗಾರರ ಪ್ರೇರಣಾದಾಯಕ ವಾಖ್ಯಗಳು ಮತ್ತು ಚೆಸ್ ಕುರಿತ ಕುತೂಹಲಕಾರಿ ಅಂಶಗಳಿವೆ. ಪಾರ್ಕ್ ಒಳಗೆ ಅಲಂಕಾರಿಕ ಗಿಡಗಳ ಜತೆ ಥರ್ಮಾಕೋಲ್‍ನಿಂದ ರಚಿಸಿರುವ ಬೃಹತ್ ಚೆಸ್ ಕಾಯಿಗಳ ಮಾದರಿಗಳು ಆಕರ್ಷಿಸುತ್ತವೆ’ ಎಂದು ಅವರು ತಿಳಿಸಿದರು.

‘ಶಾಲೆಯಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚೆಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲೂ ಮಿಂಚಿದ್ದಾರೆ. ಈ ಮಕ್ಕಳು ಹೆಚ್ಚಿನ ವೇಳೆ ಚೆಸ್‍ನಲ್ಲಿ ತೊಡಗಿಕೊಳ್ಳಲು ಹಾಗೂ ನಿರಂತರ ಅಭ್ಯಾಸದ ಕಾರಣಕ್ಕೆ ಆಟದಲ್ಲಿ ಇನ್ನಷ್ಟು ಪರಿಣತಿ ಸಾಧಿಸಲು ಈ ಪಾರ್ಕ್ ಸಹಾಯವಾಗಲಿದೆ. ಬಿಸಿಲು, ಮಳೆಯಿಂದ ರಕ್ಷಣೆಗೆ ಛಾವಣಿಯ ವ್ಯವಸ್ಥೆಯಿದೆ. ಕೆಲ ಗ್ರಾಮಸ್ಥರು ಆಸಕ್ತಿ ತೋರಿದ್ದಾರೆ. ಶಾಲೆಯಲ್ಲಿ ಒಮ್ಮೆ ಹೆಸರು ನೋಂದಾಯಿಸಿಕೊಂಡರೆ ಅಂಥವರಿಗೆ ಈ ಪಾರ್ಕ್ ಉಚಿತವಾಗಿ ಬಳಸಲು ಅವಕಾಶವಿದೆ’ ಎಂದು ಶಾಲೆ ಮುಖ್ಯಶಿಕ್ಷಕಿ ಸುಮಂಗಲಾ ಜೋಶಿ ತಿಳಿಸಿದರು.

ಭೀಮಣ್ಣ ನಾಯ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕಚೆಸ್‌ ಕಲಿಕೆಯಿಂದ ಏಕಾಗ್ರತೆ ವೃದ್ಧಿಸುತ್ತದೆ. ಈ ಪಾರ್ಕ್ ಸದ್ಬಳಕೆಯಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯಲು ಅನುಕೂಲವಾಗುತ್ತದೆ.ಬಿ.ವಿ.ಗಣೇಶ ಅಧಿಕಾರಿ ಶಿಕ್ಷಣ ಇಲಾಖೆಚೆಸ್‌ ಪಾರ್ಕ್ ನಿರ್ವಹಣೆ ಜವಾಬ್ದಾರಿ ಶಾಲೆ ಮತ್ತು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಹಗಲು ರಾತ್ರಿ ಯಾವುದೇ ಸಮಯದಲ್ಲಿ ಇಲ್ಲಿ ಚೆಸ್ ಆಡಬಹುದು. ಸೂಕ್ತ ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿದೆ.

Leave a Reply

Your email address will not be published. Required fields are marked *