ಜೀವ ರಕ್ಷಣೆ ಕೋರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ
ಪುತ್ತೂರು/ಬೆಳ್ತಂಗಡಿ: ಧರ್ಮಸ್ಥಳ ಸಂಚು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಅವರು, ಬುರುಡೆ ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಸೋಗಾನೆ ಬಲಿಯಲ್ಲಿರುವ ಕೇಂದ್ರ ಕಾರಾಗೃಹದಿಂದ ಎರಡು ದಿನಗಳ ಹಿಂದೆ ಬಿಡುಗಡೆಗೊಂಡಿದ್ದ ಚಿನ್ನಯ್ಯ, ಇದೀಗ ತಮ್ಮ ಹಾಗೂ ಪತ್ನಿಯ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ಪೊಲೀಸ್ ರಕ್ಷಣೆ ಕೋರಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಮೊರೆ ಹೋಗಿದ್ದಾರೆ.




ಚಿನ್ನಯ್ಯ ಅವರು ಸಲ್ಲಿಸಿದ ದೂರಿನಲ್ಲಿ ಬುರುಡೆ ಗ್ಯಾಂಗ್ ನ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ, ಸಮೀರ್ ಎಂಡಿ ಸೇರಿದಂತೆ ಬುರುಡೆ ಗ್ಯಾಂಗ್ ಸದಸ್ಯರು ತಮ್ಮ ವಿರುದ್ಧ ಸಂಚು ರೂಪಿಸಿ ಜೀವ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ಇದರಿಂದ ತಮ್ಮ ಹಾಗೂ ಪತ್ನಿಯ ಸುರಕ್ಷತೆಗೆ ಗಂಭೀರ ಅಪಾಯವಿದ್ದು, ಕೂಡಲೇ ರಕ್ಷಣೆ ಒದಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ಹಾಗೂ ಮುಂದಿನ ತನಿಖೆ ಕೈಗೊಂಡಿದ್ದಾರೆ.




