ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಡಬ ತಾಲ್ಲೂಕಿನ ಕಡಬ ವಲಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ಹತ್ತನೇ ವರ್ಷದ ‘ನಮ್ಮಊರು–ನಮ್ಮ ಶ್ರದ್ಧಾ ಕೇಂದ್ರ’ ಸ್ವಚ್ಛತಾ ಕಾರ್ಯಕ್ರಮವು ಮಕರ ಸಂಕ್ರಾಂತಿ ಹಬ್ಬದ ಪೂರ್ವಭಾಗವಾಗಿ ಜನವರಿ 13ರಂದು ವಿವಿಧ ದೇವಸ್ಥಾನ, ದೈವಸ್ಥಾನ ಹಾಗೂ ಶಾಲಾ ಆವರಣಗಳಲ್ಲಿ ಯಶಸ್ವಿಯಾಗಿ ನಡೆಯಿತು.





ಸ್ವಚ್ಛತಾ ಸಪ್ತಾಹದ ಅಂಗವಾಗಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬ, ಮುರಾಜೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ, ಶ್ರೀ ಕ್ಷೇತ್ರ ನಾಕೂರು ಗಯಾ ಪುಳಿಕುಕ್ಕು, ಶ್ರೀ ಆದಿನಾಗಬ್ರಹ್ಮಗಡಿ ಮುಗೆರ್ಕಳ ಹಾಗೂ ಸಹಪರಿವಾರ ದೈವಸ್ಥಾನ ಕಕ್ಕೆನಡ್ಕ, ಶ್ರೀ ಬ್ರಹ್ಮ ಮುಗೆರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಿಂಬಾಳ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಬಲ್ಯ, ಶ್ರೀ ಮಹಾವಿಷ್ಣು ದೇವಸ್ಥಾನ ಪಿಜಕಳ ಮತ್ತು ರಾಜನ್ ದೈವಸ್ಥಾನ ಪುಂಡಿತ್ ಮಾಡ ಗೋಳಿಯಡ್ಕ ರೇಂಜಿಲಾಡಿ ಸೇರಿದಂತೆ ಹಲವು ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಶೌರ್ಯ ತಂಡದ ಸದಸ್ಯರು ಹಾಗೂ ಸೇವಾಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿ ಪರಿಸರ ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಗೆ ತಮ್ಮ ಕೊಡುಗೆ ನೀಡಿದರು.


‘ನಮ್ಮಊರು–ನಮ್ಮ ಶ್ರದ್ಧಾ ಕೇಂದ್ರ’ ಅಭಿಯಾನವು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಶಿಸ್ತು ಹಾಗೂ ಸಾರ್ವಜನಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂಬ ಅಭಿಪ್ರಾಯವನ್ನು ಭಾಗವಹಿಸಿದವರು ವ್ಯಕ್ತಪಡಿಸಿದರು.


