ಬೆಂಗಳೂರು: ರಾಜ್ಯದಲ್ಲಿ ಚಳಿ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಶೀತಗಾಳಿ ಬೀಸಲಿದ್ದು, ತಾಪಮಾನ ತೀವ್ರವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ. ಈ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.




ಹಾಸನ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 9ರಿಂದ 12 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ.


ಬೆಂಗಳೂರಿನಲ್ಲಿ 12ರಿಂದ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿಯೂ ಕನಿಷ್ಠ ತಾಪಮಾನ 12ರಿಂದ 13 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಭಾರತದಿಂದ ಒಣ ಹವೆ ಪ್ರವೇಶಿಸಿರುವುದೇ ರಾಜ್ಯದಲ್ಲಿ ಶೀತಗಾಳಿ ಹೆಚ್ಚಲು ಕಾರಣವಾಗಿದೆ. ಡಿಸೆಂಬರ್ 17ರ ಬಳಿಕ ಚಳಿ ಪ್ರಮಾಣ ಕೊಂಚ ಕಡಿಮೆಯಾಗಲಿದೆ.


