ಕಡಬ: ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಳ ಗ್ರಾಮದ ಮಂಜುಗುಡ್ಡೆ ಪರಿಶಿಷ್ಟ ಕಾಲೋನಿಗೆ ಸಂಪರ್ಕ ಕಲ್ಪಿಸುವ ದಶಕಗಳ ಹಳೆಯ ಸಾರ್ವಜನಿಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಲೋನಿ ನಿವಾಸಿಗಳು ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.




ಮಂಜುಗುಡ್ಡೆ ಪರಿಶಿಷ್ಟ ಕಾಲೋನಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 40 ವರ್ಷಗಳಿಂದ ಸಾರ್ವಜನಿಕ ಬಳಕೆಯಲ್ಲಿ ಇದೆ. ಈ ಹಿಂದೆ ಆಲಿಸ್ ಚಾಕು ಅವರು ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಪಂಚಾಯತ್ ಅನುದಾನದಿಂದ ರಸ್ತೆ ನಿರ್ಮಿಸಲಾಗಿತ್ತು. ಆದರೆ ಪ್ರಸ್ತುತ ರಸ್ತೆ ತುಂಬಾ ಹದಗೆಟ್ಟಿದ್ದು ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳು ಕೂಡ ಸಂಚರಿಸಲು ಕಷ್ಟಕರವಾಗಿದೆ.
ಇತ್ತೀಚೆಗೆ ಕಾಲೋನಿ ನಿವಾಸಿಗಳು ಸ್ವಯಂಪ್ರೇರಿತವಾಗಿ ರಸ್ತೆಗೆ ಮಣ್ಣು ಹಾಕಿ ದುರಸ್ತಿ ಮಾಡಲು ಮುಂದಾದಾಗ ಸ್ಥಳೀಯ ವ್ಯಕ್ತಿಗಳು ಇದು ತಮ್ಮ ಪಟ್ಟಾ ಜಾಗ ಎಂದು ಹೇಳಿ ಕಾಮಗಾರಿಯನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ನಿವಾಸಿಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ವೇ ನಂ. 65/1, 65/2, 65/1 ಮೂಲಕ ಹಾದು ಹೋಗುವ ಈ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿರುವುದರಿಂದ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸೇರಿದಂತೆ ದೈನಂದಿನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.




ಅನೇಕ ವರ್ಷಗಳಿಂದ ಬಳಕೆಯಲ್ಲಿರುವ ಈ ರಸ್ತೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಮರು ನಿರ್ಮಿಸಿ, ರಸ್ತೆಗೆ ಅಡ್ಡಲಾಗಿ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಪರಿಶೀಲಿಸಿದ ಬಳಿಕ ಬುಧವಾರ ಪಟ್ಟಣ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್, ವಾರ್ಡ್ ಸದಸ್ಯ ಕೃಷ್ಣಪ್ಪ ಪೂಜಾರಿ, ವಿಎ ನಿಶ್ಮಿತ ಹಾಗೂ ಸಹಾಯಕ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
