ಬೆಳಗಾವಿ: ತುಳುನಾಡಿನ ದೈವಾರಾಧನೆಯಲ್ಲಿ ನಿರತರಾಗಿರುವ ಹಲವಾರು ಸಮುದಾಯಗಳು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದು, ಅವರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಆಗ್ರಹಿಸಿದರು.




ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿರುವ ದೈವ ನರ್ತಕರಾದ ನಲಿಕೆ, ಪರವ, ಪಂಬದ, ಪಾಣರ ಸೇರಿದಂತೆ ಹಲವು ಸಮುದಾಯಗಳು ದೈವಾರಾಧನಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದು ವಿವರಿಸಿದರು. ದೈವ ಪಾತ್ರಿಗಳಲ್ಲಿ ಮುಂಡಾಲ, ಆದಿ ದ್ರಾವಿಡ, ಮುಗೇರ, ಬಾಕುಡ, ಸಮಗಾರ ಸೇರಿದಂತೆ ಜೈನ, ಬಂಟ, ಬಿಲ್ಲವ ಸಮುದಾಯಗಳವರೂ ಸೇರಿದ್ದಾರೆ. ದೈವ ಚಾಕರಿಯಲ್ಲಿ ನಿರತರಾಗಿರುವವರಲ್ಲಿಯೂ ಅನೇಕ ಉಪವರ್ಗಗಳಿದ್ದು, ಸರ್ಕಾರ ಇದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು, ಇತರ ಕಲಾ ವಿಭಾಗಗಳಂತೆ ವರ್ಗೀಕರಿಸಬಾರದು ಎಂದು ಹೇಳಿದರು.
40 ವರ್ಷಕ್ಕಿಂತ ಕಡಿಮೆ ಹಾಗೂ 58 ವರ್ಷಕ್ಕಿಂತ ಮೇಲ್ಪಟ್ಟ ಹಲವರು ಸಹ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದು, ಅವರಿಗೂ ಅನುಕೂಲವಾಗುವಂತೆ ಸರಿಯಾದ ಮಾನದಂಡಗಳನ್ನು ಸರ್ಕಾರ ರೂಪಿಸಬೇಕೆಂದು ಶಾಸಕರು ಸಲಹೆ ನೀಡಿದರು.


ನಲಿಕೆ ಸಮುದಾಯದ ಕೇವಲ ಮೂವರಿಗೆ ಮಾತ್ರ ಮಾಸಾಶನ ನೀಡಲಾಗುತ್ತಿದೆ ಎಂದು ಸರ್ಕಾರದ ಅಧಿವೇಶನದ ಉತ್ತರದಲ್ಲಿ ತಿಳಿದುಬಂದಿರುವುದನ್ನು ಉಲ್ಲೇಖಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಾರಾಧನೆ ಚಾಕರಿಯಲ್ಲಿ ತೊಡಗಿರುವವರ ಸಂಖ್ಯೆ ಬಹಳ ಹೆಚ್ಚು ಎಂಬುದನ್ನು ಸರ್ಕಾರ ಗಮನಿಸಬೇಕು ಎಂದು ಒತ್ತಾಯಿಸಿದರು. ಇವರಿಗೆ ಪಿಎಫ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದಿರುವುದರಿಂದ ಅವರ ಆದಾಯವನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿ ತಿಂಗಳು ಕನಿಷ್ಠ ಎರಡು ಸಾವಿರ ಐನೂರು ರೂಪಾಯಿ ಮಾಸಾಶನ ನೀಡುವುದು, ಇತರ ರಾಜ್ಯಗಳಿಂದ ಮದುವೆಯಾಗಿ ಬಂದವರಿಗೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ನಡೆಯುತ್ತಿರುವ ತಾರತಮ್ಯ ನಿವಾರಣೆ, ಮತ್ತು ದೈವಾರಾಧನಾ ಸಮುದಾಯಗಳ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕೆಂದು ಶಾಸಕ ಕಾಮತ್ ಸರ್ಕಾರವನ್ನು ಮನವಿ ಮಾಡಿದರು.

